ಜಮ್ಮು: ರಣಜಿ ಕ್ವಾರ್ಟರ್ ಫೈನಲ್ನಲ್ಲಿ ಜಮ್ಮು-ಕಾಶ್ಮೀರ ವಿರುದ್ಧ ಕೇವಲ 206 ರನ್ಗಳಿಗೆ ಆಲೌಟ್ ಆಗುವ ಮೂಲಕ ಕರ್ನಾಟಕ ತಂಡ ಸಂಕಷ್ಟಕ್ಕೆ ಸಿಲುಕಿದೆ.
ಎರಡು ದಿನಗಳ ಆಟ ಮಳೆಯ ಕಾಟದಿಂದ ರದ್ದಾಗಿತ್ತು. ಇಂದು ಮೂರನೇ ದಿನ ಸಂಪೂರ್ಣ ನಡೆದ ಆಟದಲ್ಲಿ ಕರ್ನಾಟಕ ತಂಡ ಜಮ್ಮು-ಕಾಶ್ಮೀರ ತಂಡದ ಬೌಲಿಂಗ್ ಎದರು ರನ್ ಗಳಿಸಲು ಪರಾದಾಡಿ 206 ರನ್ಗಳಿಗೆ ಸರ್ವಪತನ ಕಂಡಿದೆ.
ಕೆ.ಸಿದ್ಧಾರ್ಥ್ ಮಾತ್ರ 76 ರನ್ ಗಳಿಸಿ ತಂಡದ ಮೊತ್ತವನ್ನು 200ರ ಗಡಿ ದಾಟಿಸಿದರು. ಇವರನ್ನು ಬಿಟ್ಟರೆ ಮನೀಷ್ ಪಾಂಡೆ 37, ಶರತ್ 26 ರನ್ ಗಳಿಸಿದ್ದೇ ಗರಿಷ್ಠ ಮೊತ್ತವಾಯಿತು.
ಅದ್ಭುತ ಬೌಲಿಂಗ್ ನಡೆಸಿದ ಜಮ್ಮು-ಕಾಶ್ಮೀರದ ಬೌಲರ್ಗಳಾದ ಅಕ್ಯುಬ್ ನಬಿ 3, ಮುಜ್ತಬ ಯೂಸುಫ್ 3, ಪರ್ವೇಜ್ ರಸೂಲ್ 3 ಹಾಗೂ ಅಬಿದ್ ಮುಷ್ತಾಕ್ ಒಂದು ವಿಕೆಟ್ ಪಡೆದರು.
ಇನ್ನು 206 ರನ್ ಗುರಿ ಬೆನ್ನತ್ತಿರುವ ಜಮ್ಮು-ಕಾಶ್ಮೀರ ತಂಡ ಮೂರನೇ ದಿನದಂತ್ಯಕ್ಕೆ 88 ರನ್ ಗಳಿಸಿ 2 ವಿಕೆಟ್ ಕಳೆದುಕೊಂಡಿದೆ. ಆರಂಭಿಕ ಸೂರ್ಯನ್ಶ್ ರೈನಾ 12, ಹೆನನ್ ಮಲಿಕ್ 12 ರನ್ ಗಳಿಸಿ ಔಟಾಗಿದ್ದರೆ, ಶುಭಮ್ ಖಜುರಿಯಾ ಔಟಾಗದೆ 39, ಶುಭಮ್ ಪಂಡಿರ್ 16 ರನ್ ಗಳಿಸಿ ಔಟಾಗದೆ ಉಳಿದಿದ್ದಾರೆ.
ಜಮ್ಮು-ಕಾಶ್ಮೀರ ತಂಡಕ್ಕೆ ಇನ್ನಿಂಗ್ಸ್ ಮುನ್ನಡೆ ಪಡೆಯಲು ಇನ್ನು 118 ರನ್ಗಳ ಅಗತ್ಯವಿದ್ದರೆ, ಕರ್ನಾಟಕ ತಂಡಕ್ಕೆ 8 ವಿಕೆಟ್ಗಳ ಅಗತ್ಯವಿದೆ. ಇನ್ನು 2 ದಿನ ಆಟ ಬಾಕಿ ಉಳಿದಿರುವುದರಿಂದ ಸ್ಪಷ್ಟ ಫಲಿತಾಂಶವೇ ಹೊರ ಬೀಳುವ ಸಾಧ್ಯತೆಯಿದೆ.
ಇನ್ನುಳಿದ ಕ್ವಾರ್ಟರ್ ಫೈನಲ್ ಪಂದ್ಯಗಳಲ್ಲಿ ಗುಜರಾತ್ ತಂಡ ಗೋವಾ ತಂಡವನ್ನು 170ಕ್ಕೆ ಆಲೌಟ್ ಮಾಡಿದ್ದು, ಎರಡನೇ ಇನ್ನಿಂಗ್ಸ್ನಲ್ಲಿ 158 ರನ್ ಗಳಿಸಿದೆ. ಒಟ್ಟಾರೆ 587 ರನ್ಗಳ ಬೃಹತ್ ಮುನ್ನಡೆ ಸಾಧಿಸಿದೆ.
ಬೆಂಗಾಲ್ ತಂಡ ಒಡಿಸ್ಸಾ ತಂಡವನ್ನು 250 ರನ್ಗಳಿಗೆ ಆಲೌಟ್ ಮಾಡಿ ಎರಡನೇ ಇನ್ನಿಂಗ್ಸ್ ಬ್ಯಾಟಿಂಗ್ ಆರಂಭಿಸಿದೆ. 82 ರನ್ಗಳ ಮೊದಲ ಇನ್ನಿಂಗ್ಸ್ ಮುನ್ನಡೆ ಸಹಿತ ಒಟ್ಟಾರೆ 161 ರನ್ಗಳ ಮುನ್ನಡೆ ಸಾಧಿಸಿದೆ.
ಸೌರಾಷ್ಟ್ರದ ವಿರುದ್ಧ ಆಂಧ್ರ ಪ್ರದೇಶ 136 ರನ್ಗಳಿಗೆ ಆಲೌಟ್ ಆಗುವ ಮೂಲಕ 263 ರನ್ಗಳ ಬೃಹತ್ ಹಿನ್ನಡೆ ಅನುಭವಿಸಿದೆ. ಎರಡನೇ ಇನ್ನಿಂಗ್ಸ್ನಲ್ಲಿ 93 ರನ್ ಗಳಿಸಿರುವ ಸೌರಾಷ್ಟ್ರ 376 ರನ್ಗಳ ಬೃಹತ್ ಮುನ್ನಡೆ ಸಾಧಿಸಿದೆ.