ನವದೆಹಲಿ:ಮುಂಬರುವ ಆಸ್ಟ್ರೇಲಿಯಾ ವಿರುದ್ಧದ ಸೀಮಿತ ಓವರ್ ಟೂರ್ನಿಗೆ ರೋಹಿತ್ ಶರ್ಮಾ ಆಡದೇ ಇರುವುದು ಕೊಹ್ಲಿ ನೇತೃತ್ವದ ಭಾರತ ತಂಡಕ್ಕೆ ಬಹುದೊಡ್ಡ ನಷ್ಟವಾಗಲಿದೆ ಎಂದು ಪಾಕಿಸ್ತಾನ ತಂಡದ ಮಾಜಿ ನಾಯಕ ರಮೀಝ್ ರಾಜಾ ಅಭಿಪ್ರಾಯಪಟ್ಟಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಗಾಯಕ್ಕೆ ತುತ್ತಾಗಿದ್ದ ರೋಹಿತ್ ಶರ್ಮಾ ಅವರಿಗೆ ಏಕದಿನ ಹಾಗೂ ಟಿ-20 ಸರಣಿಗಳಿಗೆ ವಿಶ್ರಾಂತಿ ನೀಡಲಾಗಿದೆ. ಡಿಸೆಂಬರ್ 17ರಿಂದ ಆರಂಭವಾಗಲಿರುವ ಟೆಸ್ಟ್ ಸರಣಿ ಒಳಗಾಗಿ ರೋಹಿತ್ ಟೀಮ್ ಇಂಡಿಯಾ ಕೂಡಿಕೊಳ್ಳಲಿದ್ದಾರೆ.
ಭಾರತ ತಂಡದ ಉಪನಾಯಕನಾಗಿರುವ ರೋಹಿತ್ ಶರ್ಮಾ ಸೀಮಿತ ಓವರ್ಗಳಲ್ಲಿ ಅತ್ಯುತ್ತಮ ಆಟಗಾರ, ಮ್ಯಾಚ್ ವಿನ್ನರ್ ಆಗಿದ್ದಾರೆ. ವಿಶ್ವದ ಯಾವುದೇ ತಂಡವಾದರೂ ಅವರಿಗೆ ಭಯ ಪಡದೆ ಇರದು ಎಂದು ಕಾಮೆಂಟೇಟರ್ ಆಗಿರುವ ಪಾಕ್ ಲೆಜೆಂಡ್ ಹೇಳಿದ್ದಾರೆ.
"ರೋಹಿತ್ ಒಬ್ಬ ಮ್ಯಾಚ್ ವಿನ್ನರ್, ಅವರಿಗೆ ಯಾವುದೇ ತಂಡವಾದರೂ ಭಯ ಪಡುತ್ತವೆ. ಆಸ್ಟ್ರೇಲಿಯಾ ವಿರುದ್ಧ ಅವರ ಅನುಪಸ್ಥಿತಿ ಭಾರತಕ್ಕೆ ದೊಡ್ಡ ನಷ್ಟ ಎಂದು ರಾಜಾ ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ತಿಳಿಸಿದ್ದಾರೆ.
ಆದರೆ ಟೆಸ್ಟ್ ಸರಣಿಯಲ್ಲಿ ಭಾರತ ತಂಡ ಗೆಲ್ಲುವ ಅವಕಾಶ ಕೂಡ ಇದೆ. ಏಕೆಂದರೆ ಈ ಹಿಂದೆ ಆಸ್ಟ್ರೇಲಿಯಾದಲ್ಲಿ ಇದ್ದ ಪಿಚ್ಗಳಿಗಿಂತ ಪ್ರಸ್ತುತ ಇರುವ ಪಿಚ್ಗಳಲ್ಲಿ ಬೌನ್ಸ್ ಕಡಿಮೆಯಿದೆ. ಸೈಡ್ ವೇ ಮೂವ್ಮೆಂಟ್ಗಳಿಲ್ಲದ್ದರಿಂದ ಭಾರತೀಯರು ಗೆಲ್ಲುವ ಅವಕಾಶ ಕೂಡ ಹೆಚ್ಚಿದೆ ಎಂದು ಅವರು ಹೇಳಿದ್ದಾರೆ.