ಹ್ಯಾಮಿಲ್ಟನ್: ಸೀಮಿತ ಓವರ್ಗಳಲ್ಲಿ ಅದ್ಭುತ ಫಾರ್ಮ್ನಲ್ಲಿರುವ ರಾಹುಲ್ ಅವರನ್ನು ಆರಂಭಿಕ ಸ್ಥಾನದಿಂದ ಕೆಳಗಿಳಿಸಿ 5ನೇ ಕ್ರಮಾಂಕದಲ್ಲಿ ಆಡಿಸಿರುವುದಕ್ಕೆ ಭಾರತ ತಂಡದ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನ್ಯೂಜಿಲ್ಯಾಂಡ್ ವಿರುದ್ಧ ಟಿ-20 ಸರಣಿಯಲ್ಲಿ ಅತ್ಯುತ್ತಮ ರನ್ಗಳಿಸಿ ಸರಣಿ ಶ್ರೇಷ್ಠ ಗೌರವಕ್ಕೆ ಪಾತ್ರರಾಗಿರುವ ಕೆಎಲ್ ರಾಹುಲ್ ಏಕದಿನ ಸರಣಿಯಲ್ಲಿ ಮಾತ್ರ ದಿಢೀರ್ 5ನೇ ಕ್ರಮಾಂಕದಲ್ಲಿ ಆಡಿಸುತ್ತಿರುವುದು ಉತ್ತಮ ನಿರ್ಧಾರವಲ್ಲ ಎಂದು ಕೊಹ್ಲಿ ಹಾಗೂ ತಂಡದ ಆಡಳಿತ ಮಂಡಳಿಯ ನಿರ್ಧಾರವನ್ನು ಪ್ರಶ್ನಿಸಿದ್ದಾರೆ.
"ಭಾರತ ತಂಡದ ಪರ ರಾಹುಲ್ ಜೊತೆ ಮಯಾಂಕ್ ಇನ್ನಿಂಗ್ಸ್ ಆರಂಭಿಸಿ ರಿಷಭ್ ಪಂತ್ ವಿಕೆಟ್ ಕೀಪಿಂಗ್ ಜೊತೆಗೆ ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ ನಡೆಸಲು ಅವಕಾಶ ನೀಡಬೇಕಿತ್ತು. ರಾಹುಲ್ ಸಹ ವಿಕೆಟ್ ಕೀಪಿಂಗ್ನಲ್ಲಿ ಮೌಲ್ಯವುಳ್ಳ ಆಟಗಾರರಾಗಿದ್ದಾರೆ. ಆದರೆ, ಅದು ಟಿ-20ಯಲ್ಲಿ ಯಶಸ್ವಿಯಾಗುತ್ತದೆ. ಆದರೆ 50 ಓವರ್ಗಳ ಕ್ರಿಕೆಟ್ನಲ್ಲಿ ಅವರಿಂದ ಎರಡು ಜವಾಬ್ದಾರಿಯನ್ನು ನಿರೀಕ್ಷಿಸುವುದು ಉತ್ತಮ ನಿರ್ಣಯವಾಗದು" ಎಂದು ಖಾಸಗಿ ಪತ್ರಿಕೆಯೊಂದಕ್ಕೆ ಬರೆದ ಅಂಕಣದಲ್ಲಿ ಗಂಭೀರ್ ಅಭಿಪ್ರಾಯಪಟ್ಟಿದ್ದಾರೆ.