ಹೈದರಾಬಾದ್:ನ್ಯೂಜಿಲ್ಯಾಂಡ್ ಪ್ರವಾಸ ಕೈಗೊಳ್ಳುವ ಭಾರತ ಏಕದಿನ ಕ್ರಿಕೆಟ್ ತಂಡದಲ್ಲಿ ಟೀಂ ಇಂಡಿಯಾ ಮಧ್ಯಮ ಕ್ರಮಾಂಕದ ಆಟಗಾರ ಕೇದಾರ್ ಜಾಧವ್ಗೆ ಅವಕಾಶ ಸಿಗುವುದು ಅನುಮಾನ ಎಂದು ಹೇಳಲಾಗುತ್ತಿದೆ.
ಜಾಧವ್ರನ್ನ ತಂಡದಿಂದ ಕೈಬಿಟ್ಟು ರಹಾನೆ ಅಥವಾ ಸೂರ್ಯಕುಮಾರ್ ಯಾದವ್ಗೆ ಬಿಸಿಸಿಐ ಮಣೆ ಹಾಕುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. 34 ವರ್ಷದ ಕೇದಾರ್ ಜಾಧವ್ 2023ರ ವಿಶ್ವಕಪ್ ಟೂರ್ನಿಯಲ್ಲಿ ಆಡುವುದು ಅನುಮಾನ. ಹೀಗಾಗಿ, ಯುವ ಆಟಗಾರರಿಗೆ ಬಿಸಿಸಿಐ ಅವಕಾಶ ನೀಡಲು ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.
ಮಂಗಳವಾರ ನ್ಯೂಜಿಲ್ಯಾಂಡ್ ಪ್ರವಾಸ ಕೈಗೊಳ್ಳುವ ಟೀಂ ಇಂಡಿಯಾ ಮೊದಲು 5 ಪಂದ್ಯಗಳ ಟಿ-20 ಸರಣಿ ಆಡಲಿದೆ. ಇದಾದ ನಂತರ ಏಕದಿನ ಸರಣಿಯಲ್ಲಿ ಕಿವೀಸ್ ಪಡೆಯನ್ನ ಏದುರಿಸಲಿದೆ. ಈಗಾಗಲೇ ಟಿ-20 ತಂಡವನ್ನ ಪ್ರಕಟಿಸಿದ್ದು, ಏಕದಿನ ತಂಡದಲ್ಲಿ ಕೇದಾರ್ ಜಾಧವ್ ಬದಲಿಗೆ ಅಜಿಂಕ್ಯಾ ರಹಾನೆ ಅಥವಾ ಯುವ ಆಟಗಾರ ಸೂರ್ಯಕುಮಾರ್ ಯಾದವ್ ಆಯ್ಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಈ ಬಗ್ಗೆ ಮಾಧ್ಯಮವೊಂದರ ಜೊತೆ ಮಾತನಾಡಿರುವ ಬಿಸಿಸಿಐ ಅಧಿಕಾರಿಯೊಬ್ಬರು, 'ಕೇದಾರ್ ಜಾಧವ್ 2023ರ ಏಕದಿನ ವಿಶ್ವಕಪ್ ಆಡುವ ಸಾಧ್ಯತೆ ಕಡಿಮೆ. ಅವರಿಗೀಗ ಬೌಲಿಂಗ್ ಮಾಡಲು ಕೂಡ ಸಾಧ್ಯವಾಗುತ್ತಿಲ್ಲ. ಟಿ-20 ತಂಡದಲ್ಲೂ ಜಾಧವ್ ಇಲ್ಲ. ಹೀಗಾಗಿ ಅವರ ಸ್ಥಾನದಲ್ಲಿ ಅಜಿಂಕ್ಯಾ ರಹಾನೆ ಅಥವಾ ಸೂರ್ಯಕುಮಾರ್ ಯಾದವ್ ಆಯ್ಕೆಯಾಗಬಹುದು' ಎಂದಿದ್ದಾರೆ.