ಮೆಲ್ಬೋರ್ನ್ (ಆಸ್ಟ್ರೇಲಿಯಾ): ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಬಾಕ್ಸಿಂಗ್ ಡೇ ಟೆಸ್ಟ್‌ನ ಆರಂಭಿಕ ದಿನದಂದು ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ತಂಡವನ್ನು ಮುನ್ನಡೆಸುತ್ತಿರುವ ಅಜಿಂಕ್ಯಾ ರಹಾನೆ ಅವರ ನಾಯಕತ್ವವನ್ನು ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವಿ.ವಿ.ಎಸ್. ಲಕ್ಷ್ಮಣ್ ಮೆಚ್ಚಿಕೊಂಡಿದ್ದಾರೆ.
ಆಸೀಸ್ ವಿರುದ್ಧ ಸಾಲಿಡ್ ಪ್ರದರ್ಶನ ತೋರಿದ ಟೀಂ ಇಂಡಿಯಾ ಬೌಲರ್‌ಗಳು 195 ರನ್ಗಳಿಗೆ ಕಾಂಗರೂಗಳನ್ನು ಕಟ್ಟಿಹಾಕಿದ್ದು, ವೇಗಿ ಜಸ್ಪ್ರೀತ್ ಬುಮ್ರಾ ನಾಲ್ಕು ವಿಕೆಟ್ ಕಬಳಿಸಿದರೆ, ಅಶ್ವಿನ್ 3 ಮತ್ತು ಚೊಚ್ಚಲ ಪಂದ್ಯವಾಡಿದ ಮೊಹಮ್ಮದ್ ಸಿರಾಜ್ ಎರಡು ವಿಕೆಟ್ ಪಡೆದರು.
ಭಾರತದ "ಸಂವೇದನಾಶೀಲ" ಬೌಲಿಂಗ್ ಪ್ರದರ್ಶನವನ್ನು ಲಕ್ಷ್ಮಣ್ ಶ್ಲಾಘಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಲಕ್ಷ್ಮಣ್, "ಭಾರತ ಮೊದಲ ದಿನ ಅದ್ಭುತ ಆಟ ಪ್ರದರ್ಶಿಸಿದೆ. ಬೌಲರ್‌ಗಳು ಮತ್ತೊಮ್ಮೆ ಅಮೋಘ ಪ್ರದರ್ಶನ ತೋರಿದ್ದಾರೆ. ಚೊಚ್ಚಲ ಪಂದ್ಯವಾಡಿದ ಇಬ್ಬರೂ ಆಟಗಾರರು ಆತ್ಮವಿಶ್ವಾಸದಿಂದ ಕಾಣುತ್ತಿದ್ದರು. ರಹಾನೆ ತಂಡವನ್ನು ಚೆನ್ನಾಗಿ ಮುನ್ನಡೆಸಿದ್ರು. ಮುಖ್ಯವಾಗಿ ಅವರು ಅಡಿಲೇಡ್‌ನ ನಷ್ಟವನ್ನು ಮುಂದುವರೆಸಲಿಲ್ಲ" ಎಂದಿದ್ದಾರೆ.
ಆತಿಥೇಯ ತಂಡ ಕಡಿಮೆ ರನ್ಗಳಿಗೆ ಕುಸಿತ ಕಂಡ ನಂತರ ಬ್ಯಾಟಿಂಗ್ ಆರಂಭಿಸಿದ ಭಾರತ ತಂಡಕ್ಕೆ ವೇಗಿ ಸ್ಟಾರ್ಕ್ ಶಾಕ್ ನೀಡಿದ್ರು. ಮೊದಲ ಓವರ್ನಲ್ಲೇ ಮಯಾಂಕ್ ಅಗರ್ವಾಲ್ ಶೂನ್ಯಕ್ಕೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿಕೊಂಡ್ರು. ಮೊದಲ ದಿನದಾಟದ ಅಂತ್ಯಕ್ಕೆ ಭಾರತ ತಂಡ 1 ವಿಕೆಟ್ ಕಳೆದುಕೊಂಡು 36 ರನ್ ಗಳಿಸಿದ್ದು, ಶುಭಮನ್ ಗಿಲ್ 28 ರನ್ ಮತ್ತು ಚೇತೇಶ್ವರ್ ಪೂಜಾರ 7 ರನ್ ಗಳಿಸಿ ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.