ನವದೆಹಲಿ: ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದ ವೇಳೆ ಭಾರತೀಯ ಕ್ರಿಕೆಟಿಗರನ್ನು ಆಸೀಸ್ ಅಭಿಮಾನಿಗಳು ನಿಂದಿಸಿದ್ದ ಘಟನೆಯನ್ನು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ತೀವ್ರವಾಗಿ ಖಂಡಿಸಿದ್ದಾರೆ.
ಕ್ರೀಡೆ ಮತ್ತು ಸಮಾಜದಲ್ಲಿ ವರ್ಣಭೇದ ನೀತಿಗೆ ಸ್ಥಾನವಿಲ್ಲದ ಕಾರಣ ಇಂತಹ "ತಾರತಮ್ಯ ಕೃತ್ಯಗಳನ್ನು ಸಹಿಸಲಾಗುವುದಿಲ್ಲ" ಎಂದು ಜಯ್ ಶಾ ಹೇಳಿದ್ದಾರೆ. ವೇಗಿ ಮೊಹಮ್ಮದ್ ಸಿರಾಜ್ ಮತ್ತು ಜಸ್ಪ್ರೀತ್ ಬುಮ್ರಾ ಅವರನ್ನು ಕೆಲ ಅಭಿಮಾನಿಗಳು ನಿಂದಿಸಿದ್ದು, ಭಾನುವಾರ ಕೂಡ ಇಂತಹದ್ದೇ ಘಟನೆ ಮರುಕಳಿಸಿದ ನಂತರ ಕೆಲ ಪ್ರೇಕ್ಷಕರನ್ನು ಮೈದಾನದಿಂದ ಹೊರ ಕಳುಹಿಸಲಾಯಿತು.
"ನಮ್ಮ ಶ್ರೇಷ್ಠ ಕ್ರೀಡೆಯಲ್ಲಿ ಅಥವಾ ಸಮಾಜದ ಯಾವುದೇ ಹಂತದಲ್ಲಿ ವರ್ಣಭೇದ ನೀತಿಗೆ ಸ್ಥಾನವಿಲ್ಲ. ನಾನು ಕ್ರಿಕೆಟ್ ಆಸ್ಟ್ರೇಲಿಯಾದೊಂದಿಗೆ ಮಾತನಾಡಿದ್ದೇನೆ ಮತ್ತು ಅವರು ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಈ ವಿಚಾರದಲ್ಲಿ ಬಿಸಿಸಿಐ ಮತ್ತು ಕ್ರಿಕೆಟ್ ಆಸ್ಟ್ರೇಲಿಯಾ ಒಟ್ಟಾಗಿ ನಿಲ್ಲುತ್ತವೆ. ಈ ತಾರತಮ್ಯ ಕೃತ್ಯಗಳನ್ನು ಸಹಿಸಲಾಗುವುದಿಲ್ಲ" ಎಂದು ಶಾ ಟ್ವೀಟ್ ಮಾಡಿದ್ದಾರೆ.
ಒಂದು ತಿಂಗಳ ಹಿಂದೆ ತನ್ನ ತಂದೆಯ ಸಾವಿಗೆ ಇನ್ನೂ ದುಃಖಿಸುತ್ತಿರುವ ಸಿರಾಜ್ ಅವರನ್ನು ಸಿಡ್ನಿ ಮೈದಾನದಲ್ಲಿ ಕಂದು ನಾಯಿ ಮತ್ತು ದೊಡ್ಡ ಕೋತಿ ಎಂದು ಕರೆಯಲಾಗುತ್ತಿತ್ತು ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
ಮೂರನೇ ಟೆಸ್ಟ್‌ನ ಮೂರನೇ ಮತ್ತು ನಾಲ್ಕನೇ ದಿನದಂದು ನಡೆದ ಘಟನೆಗಳನ್ನು ಕ್ರಿಕೆಟ್ ಆಸ್ಟ್ರೇಲಿಯಾ ಮತ್ತು ಐಸಿಸಿ ಕೂಡ ಖಂಡಿಸಿವೆ.