ಕೇಪ್ಟೌನ್ : ದಕ್ಷಿಣ ಆಫ್ರಿಕಾ ವೇಗಿ ಲುಂಗಿ ಎನ್‌ಗಿಡಿ ಬ್ಲ್ಯಾಕ್ ಲೈವ್ಸ್ ಮ್ಯಾಟರ್ ಆಂದೋಲನ ಬೆಂಬಲಿಸಿ ಸಹಿ ಮಾಡಿದ ಬಳಿಕ ಮಖಾಯ್ ಎನ್ಟಿನಿ, ಹರ್ಷಲ್ ಗಿಬ್ಸ್ ಮತ್ತು ವೆರ್ನಾನ್ ಫಿಲಾಂಡರ್ ಸೇರಿ 30ಕ್ಕೂ ಹೆಚ್ಚು ಹಾಲಿ ಮತ್ತು ಮಾಜಿ ದಕ್ಷಿಣ ಆಫ್ರಿಕಾ ಆಟಗಾರರು ಅಭಿಯಾನ ಬೆಂಬಲಿಸಿ ಪತ್ರಕ್ಕೆ ಸಹಿ ಹಾಕಿದ್ದಾರೆ.
ಅಭಿಯಾನ ಹಾಗೂ ಲುಂಗಿಯನ್ನು ಬೆಂಬಲಿಸಿ ರಾಷ್ಟ್ರೀಯ ಫೀಲ್ಡಿಂಗ್ ತರಬೇತುದಾರ ಜಸ್ಟಿನ್ ಒಂಟಾಂಗ್ ಸೇರಿದಂತೆ ಐವರು ಹಾಲಿ ತರಬೇತುದಾರರು ಪತ್ರಕ್ಕೆ ಸಹಿ ಹಾಕಿದ್ದಾರೆ. ಕ್ರಿಕೆಟ್ ವೆಬ್‌ಸೈಟ್ ಒಂದರ ವರದಿ ಪ್ರಕಾರ, ಈ ಪತ್ರವು ಪ್ರಪಂಚದಾದ್ಯಂತ ವರ್ಣಭೇದ ನೀತಿ ವಿರೋಧಿ ಅಭಿಯಾನದ ಪರ ಒಗ್ಗಟ್ಟು ಪ್ರದರ್ಶಿಸುವ ಪ್ರಯತ್ನವಾಗಿದೆ. ಬ್ಲ್ಯಾಕ್ ಲೈವ್ಸ್ ಮ್ಯಾಟರ್ ಆಂದೋಲನಕ್ಕೆ ಕ್ರಿಕೆಟ್ ದಕ್ಷಿಣ ಆಫ್ರಿಕಾ (ಸಿಎಸ್ಎ) ಮತ್ತು ಬಿಳಿ ಕ್ರಿಕೆಟಿಗರು ತಮ್ಮ ಬೆಂಬಲ ನೀಡಬೇಕು ಎಂದು ಪತ್ರದಲ್ಲಿ ಒತ್ತಾಯಿಸಲಾಗಿದೆ.