ರಾಜ್ಕೋಟ್:ಟೀಂ ಇಂಡಿಯಾದ ರಾಹುಲ್ ಡ್ರಾವಿಡ್ ಎಂದು ಖ್ಯಾತಿ ಗಳಿಸಿರುವ ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ್ ಪೂಜಾರ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 10 ವರ್ಷ ಪೂರೈಕೆ ಮಾಡಿದ್ದಾರೆ.
ಅಕ್ಟೋಬರ್ 9ರ 2010ರಲ್ಲಿ ಬೆಂಗಳೂರಿನಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಟೆಸ್ಟ್ ಪಂದ್ಯದಲ್ಲಿ ಡೆಬ್ಯು ಮಾಡಿದ್ದ ಚೇತೇಶ್ವರ್ ಪೂಜಾರ, ಎರಡನೇ ಇನ್ನಿಂಗ್ಸ್ನಲ್ಲಿ 72ರನ್ಗಳಿಕೆ ಮಾಡಿ ಗಮನ ಸೆಳೆದಿದ್ದರು.
ಟೆಸ್ಟ್ ಕ್ರಿಕೆಟ್ನಲ್ಲಿ ನಂಬಲರ್ಹವಾದ ನಂಬರ್ ಥ್ರೀ ಬ್ಯಾಟ್ಸ್ಮನ್ ಆಗಿರುವ ಇವರು ಟೆಸ್ಟ್ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದು, ಹೀಗಾಗಿ ಕ್ರೀಡಾಭಿಮಾನಿಗಳು ವಿಶ್ ಮಾಡಿದ್ದಾರೆ.
32 ವರ್ಷದ ಪೂಜಾರ, 2018ರಲ್ಲಿ ಭಾರತ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದ್ದ ವೇಳೆ, ಬರೋಬ್ಬರಿ 500ರನ್ಗಳಿಕೆ ಮಾಡಿ ಟೀಂ ಇಂಡಿಯಾ ಟೆಸ್ಟ್ ಸರಣಿಯನ್ನ 2 -1 ಅಂತರದಲ್ಲಿ ಗೆದ್ದುಕೊಳ್ಳುವುದರ ಜತೆಗೆ 71 ವರ್ಷದ ನಂತರ ಕಾಂಗರೂ ನಾಡಲ್ಲಿ ಈ ದಾಖಲೆ ಬರೆಯುವಂತೆ ಮಾಡಿದ್ದರು.
ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 10 ವರ್ಷ ಭಾರತೀಯ ಕ್ರಿಕೆಟಿಗನಾಗಿ 10 ವರ್ಷ ಪೂರ್ಣಗೊಳಿಸಿರುವುದು ನನ್ನ ಭಾಗ್ಯ. ರಾಜ್ಕೋಟ್ನಲ್ಲಿ ಕ್ರಿಕೆಟ್ ಆಡುತ್ತಾ ಬೆಳೆದ ನನ್ನನ್ನು ಇಲ್ಲಿಗೆ ಕರೆತಂದು ನಿಲ್ಲಿಸಿದೆ. ನಿಮ್ಮೆಲ್ಲರ ಬೆಂಬಲ ಮತ್ತು ಶುಭಾಶಯಗಳಿಗೆ ಧನ್ಯವಾದ. ತಂಡಕ್ಕೆ ಹೆಚ್ಚಿನ ಕೊಡುಗೆ ನೀಡಲು ಎದುರು ನೋಡುತ್ತಿರುವೆ ಎಂದು ಟ್ವೀಟ್ ಮಾಡಿದ್ದಾರೆ.
ಕಾಕತಾಳೀಯವಾಗಿ ಇಂದು ಪೂಜಾರ ಪತ್ನಿಯ ಜನ್ಮದಿನವಾಗಿದೆ. ಹೀಗಾಗಿ ಈ ದಿನಾಂಕ ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದಿದ್ದಾರೆ. 32 ವರ್ಷದ ಪೂಜಾರ ಇಲ್ಲಿಯವರೆಗೆ 77 ಟೆಸ್ಟ್ ಪಂದ್ಯ ಆಡಿದ್ದು, 18 ಶತಕಗಳೊಂದಿಗೆ 5,840 ರನ್ಗಳಿಕೆ ಮಾಡಿದ್ದಾರೆ.