ಹೈದರಾಬಾದ್: ಸೈಯದ್ ಮುಷ್ತಾಕ್ ಅಲಿ ಟೂರ್ನಿ ಮುಕ್ತಾಯದ ಬೆನ್ನಲ್ಲೇ ದೇಶಿ ಕ್ರಿಕೆಟ್ನ ಮಹತ್ವದ ಟೂರ್ನಿ ರಣಜಿ ಟ್ರೋಫಿಗೆ ನಾಳೆ ಚಾಲನೆ ದೊರೆಯಲಿದೆ.
ಸೋಮವಾರ ರಣಜಿ ಟ್ರೋಫಿ ಪಂದ್ಯಾವಳಿ ಆರಂಭವಾಗಲಿದ್ದು, ಸುಮಾರು ಮೂರು ತಿಂಗಳುಗಳ ಕಾಲ ನಡೆಯಲಿರುವ ಟೂರ್ನಿ ಹಲವು ದಾಖಲೆಗಳಿಗೆ ಸಾಕ್ಷಿಯಾಗಲಿದೆ. ಹಾಗಿದ್ದರೆ ಮಹತ್ವದ ಟೂರ್ನಿಯಲ್ಲಿ ನಿರ್ಮಾಣವಾಗಲಿರುವ ದಾಖಲೆಗಳ ಮೇಲೊಂದು ನೋಟ ಇಲ್ಲಿದೆ...
ದೇಶಿ ಕ್ರಿಕೆಟ್ನ ಮಹಾಟೂರ್ನಿ ರಣಜಿಗೆ ನಾಳೆ ಚಾಲನೆ... ಬಲಿಷ್ಠ ಕರ್ನಾಟಕ ತಂಡಕ್ಕೆ ತಮಿಳುನಾಡು ಸವಾಲು!
853 ರನ್ ಕಲೆಹಾಕಿದರೆ ವಾಸಿಂ ಜಾಫರ್ ಮೊದಲ ದರ್ಜೆ ಕ್ರಿಕೆಟ್ನಲ್ಲಿ 20,000 ರನ್ ಪೂರೈಸಲಿದ್ದಾರೆ. ಕಳೆದ ಆವೃತ್ತಿಯಲ್ಲಿ 1037 ರನ್ ಗಳಿಸಿದ್ದ ವಾಸಿಂ ಜಾಫರ್(ವಿದರ್ಭ ತಂಡ) ಈ ಬಾರಿಯೂ ಅದೇ ಫಾರ್ಮ್ ಮುಂದುವರೆಸಿದರೆ ಇನ್ನಷ್ಟು ದಾಖಲೆ ನಿರ್ಮಾಣವಾಗೋದು ಗ್ಯಾರಂಟಿ.
ವಾಸಿಂ ಜಾಫರ್ ಇನ್ನು ಮೂರು ಕ್ಯಾಚ್ ಪಡೆದರೆ ರಣಜಿ ಇತಿಹಾಸದಲ್ಲಿ 200 ಕ್ಯಾಚ್ ಪಡೆದ ಮೊದಲಿಗರಾಗಲಿದ್ದಾರೆ. ಇದಲ್ಲದೆ ಈ ಬಾರಿ ಜಾಫರ್ ಆಡುವ ಮೊದಲ ಪಂದ್ಯ ತಮ್ಮ ರಣಜಿ ಕರಿಯರ್ನ 150ನೇ ಪಂದ್ಯವಾಗಿದ್ದು, ವಿಶೇಷವೆಂದರೆ ಬೇರಾವ ಆಟಗಾರನೂ ಇಷ್ಟೊಂದು ರಣಜಿ ಪಂದ್ಯವನ್ನಾಡಿಲ್ಲ. ಹೀಗಾಗಿ ವಾಸಿಂ ಜಾಫರ್ರಿಂದ ಮೂರು ದಾಖಲೆಗಳು ಈ ಆವೃತ್ತಿಯಲ್ಲಿ ನಿರ್ಮಾಣವಾಗಲಿವೆ.
ಚೇತೇಶ್ವರ ಪೂಜಾರ ಈ ಆವೃತ್ತಿಯ ರಣಜಿಯಲ್ಲಿ ಒಂದು ಶತಕ ಸಿಡಿಸಿದರೆ, ಮೊದಲ ದರ್ಜೆಯಲ್ಲಿ 50 ಶತಕ ಪೂರೈಸಲಿದ್ದಾರೆ. ಈ ಮೂಲಕ ಮೊದಲ ದರ್ಜೆ ಕ್ರಿಕೆಟ್ನಲ್ಲಿ 50 ಶತಕ ಬಾರಿಸಿದ ಒಂಭತ್ತನೇ ಭಾರತೀಯ ಆಟಗಾರನಾಗಲಿದ್ದಾರೆ.
ಕರ್ನಾಟಕ ತಂಡ ತೊರೆದು ಪುದುಚೇರಿ ತಂಡ ಸೇರಿರುವ ವಿನಯ್ ಕುಮಾರ್ ಇನ್ನು 3 ವಿಕೆಟ್ ಕಿತ್ತರೆ ತಮ್ಮ ರಣಜಿ ಕರಿಯರ್ನಲ್ಲಿ 400 ವಿಕೆಟ್ ಪೂರ್ಣ ಮಾಡಲಿದ್ದಾರೆ. ವಿನಯ್ ಕುಮಾರ್ ಈ ಮೈಲಿಗಲ್ಲು ಬರೆದ ಎರಡನೇ ವೇಗದ ಬೌಲರ್ ಎನ್ನುವ ಹೆಗ್ಗಳಿಕೆಗೂ ಪಾತ್ರರಾಗಲಿದ್ದಾರೆ. 409 ವಿಕೆಟ್ ಕಿತ್ತಿರುವ ಪಂಕಜ್ ಸಿಂಗ್ ಮೊದಲ ಸ್ಥಾನದಲ್ಲಿದ್ದಾರೆ. ರಾಜಸ್ಥಾನದ ತಂಡದ ಮಾಜಿ ಬೌಲರ್ ಕಳೆದ ಬಾರಿ ಪುದುಚೇರಿ ತಂಡವನ್ನು ಪ್ರತಿನಿಧಿಸಿದ್ದರು.
ಬಿಹಾರ್ ತಂಡ ಸತತವಾಗಿ ಆರು ಪಂದ್ಯವನ್ನು ಗೆದ್ದಿದ್ದು, ಇನ್ನು ಮೂರು ಪಂದ್ಯ ಗೆದ್ದರೆ ಹೊಸ ದಾಖಲೆ ನಿರ್ಮಾಣವಾಗಲಿದೆ. 1961-62 ಹಾಗೂ 1962-63ರಲ್ಲಿ ಬಾಂಬೆ ಸತತ ಎಂಟು ರಣಜಿ ಪಂದ್ಯ ಗೆದ್ದಿರುವುದು ಸದ್ಯದ ದಾಖಲೆ.
ಪಾರ್ಥಿವ್ ಪಟೇಲ್ ವಿಕೆಟ್ ಹಿಂದೆ ಇನ್ನು 13 ಬಲಿ ಪಡೆದರೆ 300ರ ಗಡಿ ತಲುಪಲಿದ್ದಾರೆ. ಈ ಮೈಲಿಗಲ್ಲು ಬರೆದ ಐದನೇ ವಿಕೆಟ್ ಕೀಪರ್ ಆಗಲಿದ್ದಾರೆ. ನಮನ್ ಓಜ್ಹಾ, ವಿನಾಯಕ್ ಸಮಂತ್, ಮಹೇಶ್ ರಾವತ್ ಹಾಗೂ ಪಿನಲ್ ಶಾ ಈಗಾಗಲೇ 300ರ ಗಡಿ ದಾಟಿದ್ದಾರೆ.