ನವದೆಹಲಿ: ಕಳೆದು ಕೆಲವು ತಿಂಗಳಿನಿಂದ ವಿಶ್ವದಲ್ಲೆ ಕೇಳಿ ಬರುತ್ತಿರುವ ವರ್ಣಭೇದ ನಿಂದನೆ ಕ್ರಿಕೆಟ್ಗೂ ಅಂಟಿಕೊಂಡಿದ್ದು, ಆಂಗ್ಲರ ನಾಡಿನಲ್ಲಿ ಭಾರತೀಯ ಸ್ಟಾರ್ ಬ್ಯಾಟ್ಸ್ಮನ್ ಚೇತೇಶ್ವರ್ ಪೂಜಾರ ಕೂಡ ಜನಾಂಗೀಯ ನಿಂದನೆಗೆ ಒಳಗಾಗಿದ್ದರು ಎಂದು ಯಾರ್ಕ್ಷೈರ್ ಕ್ಲಬ್ನಿಂದ ಹೊರಬಂದಿರುವ ಸಿಬ್ಬಂದಿಯೊಬ್ಬರು ತಿಳಿಸಿದ್ದಾರೆ.
ಯಾರ್ಕ್ಷೈರ್ ಕ್ಲಬ್ನಲ್ಲಿ ತಾವೂ ವರ್ಣಭೇದ ನಿಂದನೆಗೆ ಒಳಗಾಗಿದ್ದು, ಇದರಿಂದ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ್ದ ಅಜೀಮ್ ರಫೀಕ್ ಈ ಹೇಳಿಕೆ ನೀಡಿದ್ದಾರೆ. ಇವರ ಆರೋಪಕ್ಕೆ ಕೆಲವು ಸಿಬ್ಬಂದಿ ಹಾಗೂ ಮಾಜಿ ಕ್ರಿಕೆಟಿಗರೂ ಕೂಡ ಸಾಕ್ಷಿ ಒದಗಿಸಿದ್ದಾರೆ.
ಪ್ರಸ್ತುತ ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಟೆಸ್ಟ್ ಸ್ಪೆಷಲಿಸ್ಟ್ ಪೂಜಾರ 2015 ಮತ್ತು 2018ರಲ್ಲಿ ಯಾರ್ಕ್ಷೈರ್ ತಂಡದ ಪರ ಕೌಂಟಿ ಕ್ರಿಕೆಟ್ನಲ್ಲಿ ಆಡಿದ್ದರು. ಯಾರ್ಕ್ಷೈರ್ನಲ್ಲಿ ಆಡುವ ಸಂದರ್ಭದಲ್ಲಿ ಪೂಜಾರ ಕೂಡ ಜನಾಂಗೀಯ ನಿಂದನಗೆ ಒಳಗಾಗಿದ್ದರು ಎಂಬ ಸ್ಫೋಟಕ ಮಾಹಿತಿಯನ್ನು ಯಾರ್ಕ್ಷೈರ್ ಮತ್ತೊಬ್ಬ ಉದ್ಯೋಗಿ ತಾಜ್ ಭಟ್ ಬಹಿರಂಗಪಡಿಸಿದ್ದಾರೆ.
" ಅಲ್ಲಿನ(ಯಾರ್ಕ್ಷೈರ್ ಕ್ಲಬ್) ಟ್ಯಾಕ್ಸಿ ಚಾಲಕರು ಮತ್ತು ರಸ್ಟೋರೆಂಟ್ ಕೆಲಸಗಾರರು ಏಷ್ಯಾದ ಸಮುದಾಯವನ್ನು ವರ್ಣದ ಆಧಾರದ ಮೇಲೆ 'ಸ್ಟೀವ್' ಎಂದು ಕರೆಯುತ್ತಿದ್ದರು. ಇದರಿಂದ ಸಾಗರೋತ್ತರ ವೃತ್ತಿಪರರಾಗಿ ಕ್ಲಬ್ ಸೇರಿಕೊಂಡಿದ್ದ ಭಾರತದ ಚೇತೇಶ್ವರ್ ಪೂಜಾರರನ್ನು ಕೂಡ ಸ್ಟೀವ್ ಎಂದು ಕರೆಯಲಾಗಿತ್ತು. ಏಕೆಂದರೆ ಅವರ ಹೆಸರನ್ನು ಉಚ್ಚರಿಸಲು ಅವರಿಗೆ ಸಾಧ್ಯವಾಗಲಿಲ್ಲ" ಎಂದು ಯಾರ್ಕ್ಷೈರ್ ಕ್ಲಬ್ನ ಉದ್ಯೋಗಿಗಳಲ್ಲಿ ಒಬ್ಬರಾದ ಭಟ್, ಮಂಚೂಣಿ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಸಮುದಾಯ ಅಭಿವೃದ್ಧಿ ಅಧಿಕಾರಿಯಾಗಿ ಯಾರ್ಕ್ಷೈರ್ ಕ್ರಿಕೆಟ್ ಸಂಸ್ಥೆಗೆ ಸೇರಿಕೊಂಡಿದ್ದ ಭಟ್ ಕ್ಲಬ್ನಲ್ಲಿ ತಮ್ಮನ್ನು ಕುರಿತು ಬಳಸುತ್ತಿದ್ದ ಭಾಷೆಗೆ ಬೇಸತ್ತು ಉದ್ಯೋಗಕ್ಕೆ ಸೇರಿದ 6 ವಾರಗಳಲ್ಲಿ ರಾಜೀನಾಮೆ ನೀಡಿ ಹೊರಬಂದಿದ್ದಾರೆ.
ಇನ್ನು ಭಟ್ ಮಾಡಿರುವ ಆರೋಪಕ್ಕೆ ಬೆಂಬಲ ಸೂಚಿಸಿರುವ ಅದೇ ಕ್ಲಬ್ನಲ್ಲಿ ಆಡಿರುವ ವೆಸ್ಟ್ ಇಂಡೀಸ್ ತಂಡದ ಮಾಜಿ ವೇಗಿ ಟಿನೋ ಬೆಸ್ಟ್ ಮತ್ತು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ರಾಣಾ ನವೀದ್ ಉಲ್ ಹಸನ್ ಕೂಡ ಸಾಕ್ಷ್ಯ ನುಡಿದಿದ್ದಾರೆ.