ಮುಂಬೈ: ವಿಜಯ್ ಹಜಾರೆ ಟ್ರೋಫಿಯಲ್ಲಿ ಸ್ಫೋಟಕ ಬ್ಯಾಟಿಂಗ್ ಮೂಲಕ ಅದ್ಭುತ ಫಾರ್ಮ್ನಲ್ಲಿರುವ ಯುವ ಬ್ಯಾಟ್ಸ್ಮನ್ ಪೃಥ್ವಿ ಶಾ, ಭಾರತ ತಂಡವನ್ನು ಸೇರಬೇಕಾದರೆ ಕಾಯುವ ಅವಶ್ಯಕತೆಯಿದೆ ಎಂದು ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ಅಭಿಪ್ರಾಯಪಟ್ಟಿದ್ದಾರೆ.
ಆಸ್ಟ್ರೇಲಿಯಾ ಪ್ರವಾಸದಲ್ಲಿ ಕೇವಲ ಒಂದು ಪಂದ್ಯದಲ್ಲಿ ಅವಕಾಶ ಪಡೆದು ಕೇವಲ 0 ಮತ್ತು 4 ರನ್ಗಳಿಗೆ ವಿಕೆಟ್ ಒಪ್ಪಿಸಿದ್ದರಿಂದ ಮುಂದಿನ ಮೂರು ಪಂದ್ಯಗಳಲ್ಲಿ ಅವಕಾಶ ಪಡೆಯುವಲ್ಲಿ ವಿಫಲರಾಗಿದ್ದರು. ಆದರೆ ಅಲ್ಲಿಂದ ಬಂದ ನಂತರ ತಮ್ಮ ತಪ್ಪುಗಳನ್ನು ತಿದ್ದಿಕೊಂಡಿರುವ ಶಾ, ವಿಜಯ ಹಜಾರೆ ಟ್ರೋಫಿಯಲ್ಲಿ 165.40 ಸರಾಸರಿಯಲ್ಲಿ 827 ರನ್ ಗಳಿಸಿದ್ದರು. ಇದರಲ್ಲಿ 4 ಶತಕ ಕೂಡ ಸೇರಿದೆ.
ಆದರೆ ಈ ಪ್ರದರ್ಶನವನ್ನು ಆಯ್ಕೆಗಾರರು ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿ ವೇಳೆ ಪರಿಗಣಿಸದೆ ಅನುಭವಿಗಳಿಗೆ ಮತ್ತು ಉತ್ತಮ ಫಾರ್ಮ್ನಲ್ಲಿರುವ ಶುಬ್ಮನ್ ಗಿಲ್ ಮತ್ತು ಸೂರ್ಯಕುಮಾರ್ ಯಾದವ್ಗೆ ಅವಕಾಶ ನೀಡಿದ್ದರು. ಅಲ್ಲದೆ ಶುಬ್ಮನ್ ಗಿಲ್ ಆಸ್ಟ್ರೇಲಿಯಾದಲ್ಲಿ 6 ಇನ್ನಿಂಗ್ಸ್ಗಳಲ್ಲಿ 259 ರನ್ ಸಿಡಿಸಿ ಸರಣಿ ಗೆಲ್ಲುವಲ್ಲಿ ನೆರವಾಗಿದ್ದರು. ಹಾಗಾಗಿ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ರೋಹಿತ್ ಮತ್ತು ಶಿಖರ್ ಧವನ್ಗೆ ಬ್ಯಾಕ್ ಅಪ್ ಆಗಿ ಟೀಮ್ ಇಂಡಿಯಾದಲ್ಲಿ ಅವಕಾಶ ಪಡೆದಿದ್ದಾರೆ.