ಜಾರ್ಜ್ಟೌನ್: ಟೀಮ್ ಇಂಡಿಯಾ ವಿಂಡೀಸ್ ವಿರುದ್ಧ ಟಿ-20 ಸರಣಿಯನ್ನು 3-0 ಯಲ್ಲಿ ವಶಪಡಿಸಿಕೊಂಡಿದ್ದು, ಮುಂದಿನ ವರ್ಷ ನಡೆಯುವ ಟಿ-20 ವಿಶ್ವಕಪ್ಗೆ ಈಗಿನಿಂದಲೇ ಉತ್ತಮ ತಂಡವನ್ನು ಕಟ್ಟುವತ್ತ ಬಿಸಿಸಿಐ ಮುನ್ನಡೆಯುತ್ತಿದೆ.
2019ರ ಏಕದಿನ ವಿಶ್ವಕಪ್ನ ಸೆಮಿಫೈನಲ್ನಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಸೋಲಿನ ಆಘಾತ ಎದುರಿಸಿ ಹೊರಬಂದಿರುವ ಭಾರತ ತಂಡ ವಿಂಡೀಸ್ ವಿರುದ್ಧ 3-0ಯಲ್ಲಿ ಟಿ-20 ಸರಣಿ ಗೆಲ್ಲುವ ಮೂಲಕ ವಿಶ್ವ ಕ್ರಿಕೆಟ್ನಲ್ಲಿ ತಾವು ಎಂದಿಗೂ ಬಲಿಷ್ಠ ಎಂದು ತೋರಿಸಿಕೊಟ್ಟಿದೆ.
2023ರ ವಿಶ್ವಕಪ್ಗೆ ಇನ್ನು 4 ವರ್ಷ ಕಾಲಾವಕಾಶವಿದೆ. ನಾವೂ ಈಗಾಗಲೆ ಏಕದಿನ ಕ್ರಿಕೆಟ್ನಲ್ಲಿ ಎರಡನೇ ಸ್ಥಾನದಲ್ಲಿದ್ದೇವೆ. ಟೀಮ್ ಇಂಡಿಯಾ 50 ಓವರ್ಗಳ ಫಾರ್ಮೇಟ್ನಲ್ಲಿ ಸ್ಥಿರತೆಯುಳ್ಳ ತಂಡವಾಗಿರುವುದರಿಂದ 2023 ವಿಶ್ವಕಪ್ ಬಗ್ಗೆ ಆಲೋಚನೆ ಮಾಡುವ ಅಗತ್ಯವಿಲ್ಲ. 3-4 ವರ್ಷಗಳ ಸಮಯದಲ್ಲಿ ನಾವು ನಂಬರ್ ಒನ್ ಆಗುತ್ತೇವೆ. ಅದರಲ್ಲಿ ಸಂಶಯವಿಲ್ಲ ಎಂದು ಕೊಹ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
2020ಕ್ಕೆ ಟಿ-20 ವಿಶ್ವಕಪ್ ಇರುವುದರಿಂದ ಹೆಚ್ಚಿನ ಮಹತ್ವವನ್ನು ಈ ವಿಭಾಗದಕ್ಕೆ ನೀಡಬೇಕಿದೆ. ಇನ್ನು ಒಂದು ವರ್ಷ ಕಾಲಾವಾಕಾಶದಲ್ಲಿ ಟಿ-20 ಶ್ರೇಯಾಂಕದಲ್ಲಿ ಮೊದಲ ಸ್ಥಾನಕ್ಕೇರುವತ್ತ ಗಮನಹರಿಸುತ್ತೇವೆ. ವಿಂಡೀಸ್ ವಿರುದ್ಧದ ಈ ಮೂರು ಗೆಲುವುಗಳು ನಮ್ಮ ತಂಡ ಎಷ್ಟು ಬಲಿಷ್ಠ ಎಂದು ತೋರಿಸಲು ನಿದರ್ಶನವಾಗಿದೆ ಎಂದು ಕೊಹ್ಲಿ ತಿಳಿಸಿದ್ದಾರೆ.
ಇನ್ನು ಕೊನೆಯ ಪಂದ್ಯದಲ್ಲಿ ಪಂತ್ ಆಟವನ್ನು ಕುರಿತು ಮೆಚ್ಚುಗೆ ವ್ಯಕ್ತಪಡಿಸಿರುವ ಕೊಹ್ಲಿ, ಮೊದಲೆರಡು ಪಂದ್ಯಗಳಲ್ಲಿ ಹೆಚ್ಚು ರನ್ಗಳಿಸದೇ ನಿರಾಶೆ ಮೂಡಿಸಿದ್ದರು. ಆದರೆ ಕೊನೆಯ ಪಂದ್ಯದಲ್ಲಿ ಅತ್ಯುತ್ತಮವಾಗಿ ಆಡುವ ಮೂಲಕ ಅವರ ಮೇಲಿಟ್ಟಿದ್ದ ನಿರೀಕ್ಷೆಯನ್ನು ಉಳಿಸಿಕೊಂಡಿದ್ದಾರೆ ಎಂದರು.