ಹೈದರಾಬಾದ್: ಆಗಸ್ಟ್ 18ರಿಂದ ಸೆಪ್ಟೆಂಬರ್ 10ರ ವರೆಗೆ ನಡೆಯಲಿರುವ ಕೆರಿಬಿಯನ್ ಪ್ರೀಮಿಯರ್ ಲೀಗ್ನಲ್ಲಿ 48 ವರ್ಷದ ಪ್ರವೀಣ್ ತಾಂಬೆ ಅವಕಾಶ ಪಡೆದುಕೊಂಡಿದ್ದು, ಈ ಟೂರ್ನಿಯಲ್ಲಿ ಭಾಗಿಯಾಗುತ್ತಿರುವ ಮೊದಲ ಭಾರತೀಯ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.
ಕೆರಿಬಿಯನ್ ಪ್ರೀಮಿಯರ್ ಲೀಗ್ನ ಆರು ಪ್ರಾಂಚೈಸಿಗಳು ತಮ್ಮ ತಂಡ ಪ್ರಕಟಗೊಳಿಸಿದ್ದು, ಟೀಂ ಇಂಡಿಯಾ ಮಾಜಿ ಲೆಗ್ ಸ್ಪಿನ್ನರ್ ಪ್ರವೀಣ್, ಟ್ರಿನ್ಬಾಗೊ ನೈಟ್ ರೈಡರ್ಸ್ನಲ್ಲಿ ಅವಕಾಶ ಪಡೆದುಕೊಂಡಿದ್ದಾರೆ. ಬಾಲಿವುಡ್ ನಟ ಶಾರೂಖ್ ಖಾನ್ ಅವರ ಮಾಲೀಕತ್ವದ ತಂಡ ಇದಾಗಿದೆ. ಇದರ ಜತೆಗೆ ಈ ತಂಡದಲ್ಲಿ ರಶೀದ್ ಖಾನ್, ಮಾರ್ಕಸ್ ಸ್ಟೋಯ್ನಿಸ್, ರಾಸ್ ಟೇಲರ್ ಕೂಡ ಆಡಲು ಒಪ್ಪಿಗೆ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.