ದುಬೈ:ನಿಕೋಲಸ್ ಪೂರನ್ ಸ್ಫೋಟಕ ಅರ್ಧಶತಕದ ನೆರವಿನಿಂದ ಅಗ್ರಸ್ಥಾನಿಯಾಗಿರುವ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಪಂಜಾಬ್ ತಂಡ 5 ವಿಕೆಟ್ಗಳ ಗೆಲುವು ಸಾಧಿಸಿ ಪ್ಲೇ ಆಫ್ ಕನಸನ್ನು ಮತ್ತಷ್ಟು ಬಲಪಡಿಸಿಕೊಂಡಿದೆ.
ಮೊದಲು ಬ್ಯಾಟಿಂಗ್ ನಡೆಸಿದ ಡೆಲ್ಲಿ ತಂಡ ಶಿಖರ್(106) ಧವನ್ ಸಿಡಿಸಿದ ಅದ್ಭುತ ಶತಕದ ನೆರವಿನಿಂದ 20 ಓವರ್ಗಳಲ್ಲಿ 164 ರನ್ಗಳಿಸಿತ್ತು.
165 ರನ್ಗಳ ಗುರಿ ಪಡೆದಿದ್ದ ಪಂಜಾಬ್ 20 ಓವರ್ಗಳಲ್ಲಿ ಇನ್ನು ಒಂದು ಓವರ್ ಬಾಕಿ ಉಳಿದಿರುವಂತೆ 5 ವಿಕೆಟ್ ಕಳೆಂದುಕೊಂಡು ಗುರಿ ತಲುಪಿತು. ವಿಶೇಷವೆಂದರೆ ಪಂಜಾಬ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ 3 ತಂಡಗಳ ವಿರುದ್ಧ ಜಯ ದಾಖಲಿಸಿತು.
ಆರಂಭಿಕರಾಗಿ ಕಣಕ್ಕಿಳಿದ ರಾಹುಲ್(15) ರನ್ಗಳಿಗೆ ವಿಕೆಟ್ ಒಪ್ಪಿಸಿದರು. ಆದರೆ ನಂತರ ಬಂದ ಕ್ರಿಸ್ ಗೇಲ್ ಕೇವಲ 13 ಎಸೆತಗಳಲ್ಲಿ 2 ಸಿಕ್ಸರ್ ಹಾಗೂ 3 ಬೌಂಡರಿಸಹಿತ 29 ರನ್ಗಳಿಸಿ ಪವರ್ಪ್ಲೇನಲ್ಲಿ ಅದ್ಭುತ ಪ್ರದರ್ಶನ ತೋರಿ ಪಂದ್ಯದ ಗತಿಯನ್ನೇ ಬದಲಾಯಿಸಿದರು. ಆದರೆ ಆಶ್ವಿನ್ ಬೌಲಿಂಗ್ನಲ್ಲಿ ಕ್ಲೀನ್ ಬೌಲ್ಡ್ ಆದರು. ಇದೇ ಓವರ್ನಲ್ಲಿ ಪೂರನ್ ಮಾಡಿದ ಎಡವಟ್ಟಿನಿಂದ ಮಯಾಂಕ್ ಅಗರ್ವಾಲ್ ರನ್ಔಟ್ ಆದರು.
ಆದರೆ 4ನೇ ವಿಕೆಟ್ಗೆ ಒಂದಾದ ನಿಕೋಲಸ್ ಪೂರನ್ ಹಾಗೂ ಗ್ಲೆನ್ ಮ್ಯಾಕ್ಸ್ವೆಲ್ 69 ರನ್ಗಳ ಜೊತೆಯಾಟ ನಡೆಸಿ ಪಂದ್ಯದ ಗತಿಯನ್ನ ಬದಲಿಸಿದರು. ಅದರಲ್ಲೂ ಸ್ಪೋಟಕ ಇನ್ನಿಂಗ್ಸ್ ಕಟ್ಟಿದ ಪೂರನ್ 28 ಎಸೆತಗಳಲ್ಲಿ 3 ಸಿಕ್ಸರ್ಸ್ ಹಾಗೂ 6 ಬೌಂಡರಿ ಸಹಿತ 53 ರನ್ಗಳಿಸಿ ರಬಾಡ ಬೌಲಿಂಗ್ನಲ್ಲಿ ಕೀಪರ್ಗೆ ಕ್ಯಾಚ್ ನೀಡಿ ಔಟಾದರು. ಇವರಿಗೆ ಬೆಂಬಲ ನೀಡಿದ ಗ್ಲೆನ್ ಮ್ಯಾಕ್ಸ್ವೆಲ್ 24 ಎಸೆತಗಳಲ್ಲಿ 3 ಬೌಂಡರಿ ಸಹಿತ 32 ರನ್ಗಳಿಸಿ ತಂಡವನ್ನು ಗೆಲುವಿನ ಸನಿಹ ತಂದ ರಬಾಡಗೆ 2ನೇ ಬಲಿಯಾದರು.
ಆದರೆ ದೀಪಕ್ ಹೂಡ ಹಾಗೂ ಜೇಮ್ಸ್ ನಿಶಾಮ್ ಮುರಿಯದ 6ನೇ ವಿಕೆಟ್ಗೆ 22 ರನ್ ಸೇರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.
ಡೆಲ್ಲಿ ಪರ ಕಗಿಸೊ ರಬಾಡ 27ಕ್ಕೆ 2 , ಅಕ್ಸರ್ ಪಟೇಲ್ 27ಕ್ಕೆ 1, ಅಶ್ವಿನ್ 27ಕ್ಕೆ 1 ವಿಕೆಟ್ ಪಡೆದು ಮಿಂಚಿದರು.