ಅಬುಧಾಬಿ:13ನೇ ಆವೃತ್ತಿಯ ಐಪಿಎಲ್ನಲ್ಲಿ ಕಳಪೆ ಬ್ಯಾಟಿಂಗ್ ಪ್ರದರ್ಶನ ತೋರುತ್ತಿರುವ ಯುವ ಬ್ಯಾಟ್ಸ್ಮನ್ ಪೃಥ್ವಿ ಶಾ ಅವರನ್ನು ಮುಂದಿನ ಕ್ವಾಲಿಫೈಯರ್ 2 ಪಂದ್ಯದಲ್ಲಿ ಡ್ರಾಪ್ ಮಾಡಿ ಹೊಸ ಆರಂಭಿಕ ಆಟಗಾರನನ್ನು ಕಣಕ್ಕಿಳಿಸಲು ಡೆಲ್ಲಿ ಕ್ಯಾಪಿಟಲ್ಸ್ ಚಿಂತಿಸುತ್ತಿದೆ ಎಂದು ವರದಿಗಳಿಂದ ತಿಳಿದು ಬಂದಿದೆ.
13ನೇ ಆವೃತ್ತಿಯಲ್ಲಿ 13 ಪಂದ್ಯಗಳಿಂದ ಪೃಥ್ವಿ ಶಾ ಕೇವಲ 228 ರನ್ ಗಳಿಸಿದ್ದಾರೆ. ಅದರಲ್ಲೂ ಕಳೆದ 8 ಇನ್ನಿಂಗ್ಸ್ಗಳಲ್ಲಿ ಅವರ ಗರಿಷ್ಠ ಸ್ಕೋರ್ ಕೇವಲ 19 ರನ್ ಆಗಿದೆ. ಸತತ ವೈಫಲ್ಯ ಅನುಭವಿಸಿರುವ ಅವರನ್ನು ಮುಂದಿನ ನಿರ್ಣಾಯಕ ಪಂದ್ಯದಲ್ಲಿ ಆಡಿಸುವ ತಾಳ್ಮೆಯನ್ನು ಡೆಲ್ಲಿ ಕ್ಯಾಪಿಟಲ್ಸ್ ಆಡಳಿತ ಮಂಡಳಿ ಹೊಂದಿಲ್ಲ ಎಂದು ತಿಳಿದು ಬಂದಿದೆ.
ಪೃಥ್ವಿ ಶಾ ಕ್ವಾಲಿಫೈಯರ್ ಪಂದ್ಯ ಸೇರಿದಂತೆ ಕಳೆದ 8 ಪಂದ್ಯಗಳಲ್ಲಿ 3 ಬಾರಿ ಸೊನ್ನೆಗೆ ವಿಕೆಟ್ ಒಪ್ಪಿಸಿದ್ದಾರೆ. ಹಾಗಾಗಿ ಭಾನುವಾರದ ಪಂದ್ಯದಲ್ಲಿ ಅವರು ಕಣಕ್ಕಿಳಿಯುವ ಸಾಧ್ಯತೆ ಕಡಿಮೆ ಎನ್ನಲಾಗಿದೆ.
ಆದರೆ ಪೃಥ್ವಿ ಶಾ ಸ್ಥಾನಕ್ಕೆ ಸರಿಹೊಂದುವ ಆರಂಭಿಕ ಆಟಗಾರರನ್ನು ಡೆಲ್ಲಿ ಹೊಂದಿಲ್ಲ. ಈಗಾಗಲೇ ಒಂದೆರಡು ಪಂದ್ಯಗಳಲ್ಲಿ ರಹಾನೆ ಅವರನ್ನ ಕಣಕ್ಕಿಳಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಬಿಗ್ಬ್ಯಾಶ್ನಲ್ಲಿ ಆರಂಭಿಕನಾಗಿ ಅನುಭವ ಹೊಂದಿರುವ ಮಾರ್ಕಸ್ ಸ್ಟೋಯ್ನಿಸ್ರನ್ನು ಆರಂಭಿಕನಾಗಿ ಇಳಿಸಲು ಕ್ಯಾಪಿಟಲ್ಸ್ ಆಲೋಚಿಸುತ್ತಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಈಗಾಗಲೇ ಧವನ್ 15 ಪಂದ್ಯಗಳಿಂದ 535 ರನ್ ಳಿಸಿ ಉತ್ತಮ ಫಾರ್ಮ್ನಲ್ಲಿದ್ದರೆ, ಸ್ಟೋಯ್ನಿಸ್ 15 ಪಂದ್ಯಗಳಿಂದ 150ರ ಸ್ಟ್ರೈಕ್ ರೇಟ್ನಲ್ಲಿ 345 ರನ್ ಗಳಿಸಿದ್ದಾರೆ. ಇದರಲ್ಲಿ 3 ಅರ್ಧಶತಕ ಕೂಡ ಸೇರಿವೆ. ಹಾಗಾಗಿ ಮುಂದಿನ ಪಂದ್ಯದಲ್ಲಿ ಈ ಜೋಡಿ ಕಣಕ್ಕಿಳಿದರೆ ಯಾವುದೇ ಆಶ್ಚರ್ಯವಿಲ್ಲ.