ಮುಂಬೈ:ಮಂಗಳವಾರದಿಂದ ಭಾರತದ ವಿರುದ್ಧ ಆರಂಭವಾಗಲಿರುವ ಏಕದಿನ ಸರಣಿಯನ್ನು ಆಸ್ಟ್ರೇಲಿಯಾ 2-1ರಲ್ಲಿ ಗೆಲ್ಲಲಿದೆ ಎಂದು ಆಸೀಸ್‌ನ ಮಾಜಿ ನಾಯಕ ರಿಕಿ ಪಾಂಟಿಂಗ್ ಭವಿಷ್ಯ ನುಡಿದ್ದಾರೆ.
ಮಂಗಳವಾರ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಏಕದಿನ ಸರಣಿಯ ಮೊದಲ ಪಂದ್ಯವನ್ನಾಡಲಿವೆ. ಸರಣಿ ಆರಂಭಕ್ಕೂ ಮೊದಲೇ ಆಸೀಸ್ ಮಾಜಿ ನಾಯಕ ರಿಕಿ ಪಾಂಟಿಂಗ್ ಆಸ್ಟ್ರೇಲಿಯಾ 2-1ರಲ್ಲಿ ಸರಣಿ ಗೆಲ್ಲಲಿದೆ ಎಂದು ಟ್ವಿಟರ್ನಲ್ಲಿ ಭವಿಷ್ಯ ನುಡಿದಿದ್ದಾರೆ.
'ಆಸ್ಟ್ರೇಲಿಯಾ ವಿಶ್ವಕಪ್ ಹಾಗೂ ತವರಿನ ಟೆಸ್ಟ್ ಸರಣಿಗಳಲ್ಲಿ ಅತ್ಯುತ್ತಮ ಪ್ರದರ್ಶನ ತೋರಿ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದೆ. ಆಸ್ಟ್ರೇಲಿಯಾ ವಿರುದ್ಧ ಕಳೆದ ಏಕದಿನ ಸರಣಿಯ ಸೋಲನ್ನು ತೀರಿಸಿಕೊಳ್ಳುವ ಉತ್ಸಾಹದಲ್ಲಿ ಭಾರತ ತಂಡವಿದೆ. ಆದರೆ, ಸರಣಿಯನ್ನು 2:1ರಲ್ಲಿ ಆಸೀಸ್ ಗೆಲ್ಲಲಿದೆ' ಎಂದು ಪಾಂಟಿಂಗ್ ಅಭಿಮಾನಿಯೊಬ್ಬರ ಪ್ರಶ್ನೆಗೆ ಟ್ವೀಟ್ ಮೂಲಕ ಉತ್ತರಿಸಿದ್ದಾರೆ.
ಆಸೀಸ್ ತವರಿನಲ್ಲಿ ನಡೆದ ಪಾಕಿಸ್ತಾನ ಹಾಗೂ ನ್ಯೂಜಿಲ್ಯಾಂಡ್ ತಂಡಗಳನ್ನು ಕ್ಲೀನ್ಸ್ವೀಪ್ ಮಾಡಿದ ಆತ್ಮವಿಶ್ವಾಸದಲ್ಲಿದೆ. ಇತ್ತ ಭಾರತ ತಂಡ ಕೂಡ ಸತತ 2 ಟೆಸ್ಟ್ ಸರಣಿ ಕ್ಲೀನ್ ಸ್ವೀಪ್ ಮಾಡಿ ಎರಡು ಟಿ20 ಸರಣಿ ಹಾಗೂ ಒಂದು ಏಕದಿನ ಸರಣಿ ಗೆದ್ದಿರುವ ಆತ್ಮವಿಶ್ವಾಸದಲ್ಲಿದೆ. ಅಲ್ಲದೆ ಕಳೆದ ಬಾರಿ ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿಯ ಸೇಡನ್ನು ತೀರಿಸಿಕೊಳ್ಳಲು ಕಾತುರದಿಂದಿದೆ.
ಆಸ್ಟ್ರೇಲಿಯಾ ತಂಡಕ್ಕೆ ಮಾರ್ನಸ್ ಲಾಬುಶೇನ್ ಸೇರಿಕೊಂಡಿರುವುದನ್ನು ಕುರಿತು ಮಾತನಾಡಿರುವ ಪಾಂಟಿಂಗ್, 'ಲಾಬುಶೇನ್ ಆಸೀಸ್ ಮಧ್ಯಮ ಕ್ರಮಾಂಕಕ್ಕೆ ಉತ್ತಮ ಕೊಡುಗೆ ನೀಡಿದ್ದಾರೆ. ಸ್ಪಿನ್ ಬೌಲಿಂಗ್ಗೆ ಅತ್ಯುತ್ತಮ ಆಟಗಾರ. ವಿಕೆಟ್ಗಳ ಮಧ್ಯೆ ರನ್ ಕದಿಯುವುದರಲ್ಲಿ ನಿಸ್ಸೀಮ. ಫೀಲ್ಡಿಂಗ್ನಲ್ಲಿ ಹಾಗೂ ತಂಡಕ್ಕೆ ಅಗತ್ಯವಿದ್ದಾಗ ಅರೆಕಾಲಿಕ ಸ್ಪಿನ್ನರ್ ಆಗಿಯೂ ಕಾರ್ಯ ನಿರ್ವಹಿಸಲಿದ್ದಾರೆ. ಹಾಗಾಗಿ ಆತನೊಬ್ಬ ಪರಿಪೂರ್ಣವಾದ ಆಟಗಾರ' ಎಂದು ಪಾಂಟಿಂಗ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಮೊದಲ ಏಕದಿನ ಪಂದ್ಯ ವಾಂಖೆಡೆಯಲ್ಲಿ ಜನವರಿ 14ರಂದು, 2ನೇ ಏಕದಿನ ಪಂದ್ಯ ಜನವರಿ17ರಂದು ರಾಜ್ಕೋಟ್ನಲ್ಲಿ, ಮೂರನೇ ಪಂದ್ಯ ಜನವರಿ 19ರಂದು ಬೆಂಗಳೂರಿನಲ್ಲಿ ನಡೆಯಲಿದೆ.