ಟ್ರಿನಿಡಾಡ್: ಕೆರಿಬಿಯನ್ ಲೀಗ್ನ ಶನಿವಾರ ನಡೆದ ಬಾರ್ಬಡೊಸ್ ವಿರುದ್ಧದ ಪಂದ್ಯದಲ್ಲಿ ಅಬ್ಬರಿಸಿದ ಪೊಲಾರ್ಡ್ ಕೇವಲ 28 ಎಸೆತಗಳಲ್ಲಿ 72 ರನ್ ಚಚ್ಚುವ ಮೂಲಕ ಟ್ರಿಂಬಾಗೊ ನೈಟ್ ರೈಡರ್ಸ್ಗೆ ಸತತ 6ನೇ ಜಯ ತಂದುಕೊಟ್ಟರು.
ಶನಿವಾರ ನಡೆದ ಲೀಗ್ನ 12 ನೇ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಹಾಲಿ ಚಾಂಪಿಯನ್ ಬಾರ್ಬಡೊಸ್ಟ್ರಿಡೆಂಟ್ಸ್ 20 ಓವರ್ಗಳಲ್ಲಿ 148 ರನ್ಗಳಿಸಿತ್ತು. ಜಾನ್ಸನ್ ಚಾರ್ಲ್ಸ್ 47, ಕೈಲ್ ಮೇಯರ್ಸ್ 42 ರನ್ಗಳಿಸಿದರು.
ನೈಟ್ರೈಡರ್ಸ್ ಪರ ಅಕೀಲ್ ಹುಸೇನ್ ಜೇಡನ್ ಸೀಲ್ಸ್ ಹಾಗೂ ಸಿಕಂದರ್ ರಾಜಾ ತಲಾ ಎರಡು ವಿಕೆಟ್ ಪಡೆದರು.
149 ರನ್ಗಳ ಗುರಿ ಪಡೆದ ಟಿಕೆಆರ್ ನಿರಂತರವಾಗಿ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿತು. ಕೇವಲ 6 ರನ್ಗಳಾಗುವಷ್ಟರಲ್ಲಿ ಟಿಯೋನ್ ವೆಬ್ಸ್ಟರ್(5), ಮನ್ರೊ (0) ವಿಕೆಟ್ ಕಳೆದುಕೊಂಡಿತು. ನಂತರ ಬಂದ ಡರೇನ್ ಬ್ರಾವೋ(6), ಟಿಮ್ ಸೀಫರ್ಟ್(4) ಹಾಗೂ ಅಕೀಲ್ ಹುಸೇನ್(12) ಕೂಡಟ ಬಂದಷ್ಟೇ ವೇಗವಾಗಿ ವಿಕೆಟ್ ಒಪ್ಪಿಸಿದರು.
ಈ ಹಂತದಲ್ಲಿ ಸಿಮನ್ಸ್ ಜೊತೆಗೂಡಿದ ಪೊಲಾರ್ಡ್ 6ನೇ ವಿಕೆಟ್ ಜೊತೆಯಾಟದಲ್ಲಿ 31 ರನ್ ಸೇರಿಸಿ ತಂಡದ ಮೊತ್ತವನ್ನು 100ಗಡಿ ದಾಟಿಸಿದರು. 29 ಎಸೆತಗಳಲ್ಲಿ 3 ಸಿಕ್ಸರ್ ಸಹಿತ 32 ರನ್ಗಳಿಸಿದ್ದ ಸಿಮನ್ಸ್ ಸ್ಟಂಪ್ ಔಟ್ ಆದರು. ಆದರೆ ಏಕಾಂಗಿಯಾಗಿ ಹೋರಾಡಿದ ಪೊಲಾರ್ಡ್ 28 ಎಸೆತಗಳಲ್ಲಿ 9 ಸಿಕ್ಸರ್ ಹಾಗೂ 2 ಬೌಂಡರಿ ಸಹಿತ 72 ರನ್ಗಳಿಸಿ ಗೆಲುವಿಗೆ 4 ಎಸೆತಗಳಲ್ಲಿ 8 ರನ್ ಅಗತ್ಯವಿದ್ದಾಗ ಔಟಾದರು. ಖಾರಿ ಪೆರ್ರಿ ಕೊನೆಯ ಓವರ್ನಲ್ಲಿ ಸಿಕ್ಸರ್ ಸಿಡಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು.
ಈ ಗೆಲುವಿನ ಮೂಲಕ ಟೂರ್ನಿಯಲ್ಲಿ ಆಡಿದ 6 ಪಂದ್ಯಗಳಲ್ಲೂ ಟಿಕೆಆರ್ ಗೆಲುವು ಸಾಧಿಸಿದರೆ. ಬಾರ್ಬಡೊಸ್ 6 ಪಂದ್ಯಗಳಲ್ಲಿ 4 ಸೋಲು 2 ಗೆಲುವಿನೊಂದಿಗೆ 4ನೇ ಸ್ಥಾನದ್ಲೇ ಉಳಿಯಿತು.
ಮತ್ತೊಂದು ಪಂದ್ಯದಲ್ಲಿ ಜಮೈಕಾ ತಲವಾಸ್ ಪೇಟ್ರಿಯೋಟ್ಸ್ ವಿರುದ್ಧ 37 ರನ್ಗಳ ಜಯ ಸಾಧಿಸಿದೆ. ಮೊದಲು ಬ್ಯಾಟಿಂಗ್ ನಡೆಸಿದ ಜಮೈಕಾ 147 ರನ್ಗಳಿಸಿದರೆ, ಎಸ್ಎನ್ಪಿ 110 ರನ್ಗಳಿಗೆ ಆಲೌಟ್ ಆಯಿತು.