ನವದೆಹಲಿ: ಭಾರತ ತಂಡದ ಕ್ರಿಕೆಟಿಗರು ತಾವೇ ಮಾಸ್ಕ್ ತಯಾರಿಸಿ ಧರಿಸಿಕೊಳ್ಳುವ ಮೂಲಕ ಕೊರೊನಾ ವಿರುದ್ಧ ವಿಶೇಷವಾಗಿ ಜಾಗೃತಿ ಮೂಡಿಸಿರುವ ಕಾರ್ಯಕ್ಕೆ ಮುಂದಾದ ಬಿಸಿಸಿಐಗೆ ಪ್ರಧಾನಿ ನರೇಂದ್ರ ಮೋದಿ ಪ್ರಶಂಶಿಸಿದ್ದಾರೆ.
ಈಗಾಗಲೆ ಕೊರೊನಾ ಭಾರತದಾದ್ಯಂತ ಕೊರೊನಾ ತಾಂಡವವಾಡುತ್ತಿದ್ದು, ದೇಶದಲ್ಲಿ ಕೊರೊನಾ ಹರಡದಂತೆ ತಡೆಯಲು ತಮ್ಮ ಕೈಲಾದಷ್ಟು ದೇಣಿಗೆ ನೀಡಿದ್ದ ಭಾರತ ತಂಡದ ಹಾಲಿ ಹಾಗೂ ಮಾಜಿ ಕ್ರಿಕೆಟಿಗರು ತಾವೇ ಮನೆಯಲ್ಲಿ ಮಾಸ್ಕ್ ತಯಾರಿಸಿ ಜಾಗೃತಿ ಮೂಡಿಸುತ್ತಿದ್ದಾರೆ.
ಕೊರೊನಾ ದಾಳಿ ಹೆಚ್ಚಾದಂತೆ ಮಾಸ್ಕ್ ಹಾಗೂ ಸ್ಯಾನಿಟೈಸರ್ ಕೊರತೆ ಎದುರಾಗಿತ್ತು. ಇದೀಗ ಮನೆಯಲ್ಲಿ ಮಾಸ್ಕ್ ತಯಾರಿಸುವುದನ್ನು ಸ್ವತಃ ಸೆಲೆಬ್ರಿಟಿಗಳೆ ಮಾಡಿ ತೋರಿಸುವುದರಿಂದ ಸಾರ್ವಜನಿಕರು ಕೂಡ ತಾವೂ ತಮ್ಮ ಮನೆಯಲ್ಲಿ ಮಾಸ್ಕ್ಗಳನ್ನು ತಯಾರಿಸಿಕೊಳ್ಳಬೇಕೆಂಬುದು ಇದರ ಉದ್ದೇಶವಾಗಿದೆ.
ವಿರಾಟ್ ಕೊಹ್ಲಿ, ಸೌರವ್ ಗಂಗೂಲಿ, ಸಚಿನ್ ತೆಂಡೂಲ್ಕರ್, ಹರ್ಭಜನ್ ಸಿಂಗ್, ರೋಹಿತ್ ಶರ್ಮಾ ಹಾಗೂ ಸ್ಮೃತಿ ಮಂದಾನ #TeamMaskForce ಎಂದ ಹ್ಯಾಶ್ಟ್ಯಾಗ್ನಲ್ಲಿ ಟ್ವಿಟರ್ನಲ್ಲಿ ಈ ಮಹತ್ವದ ಅಭಿಯಾನಕ್ಕೆ ಕೈಜೋಡಿಸಿದ್ದಾರೆ. ಈ ವಿಡಿಯೋವನ್ನು ಬಿಸಿಸಿಐ ತನ್ನ ಟ್ವಿಟರ್ನಲ್ಲಿ ಶೇರ್ ಮಾಡಿಕೊಂಡಿದೆ. ಈ ಟ್ವೀಟ್ಅನ್ನು ಪ್ರಧಾನಮಂತ್ರಿ ನರೆಂದ್ರ ಮೋದಿ ರೀಟ್ವೀಟ್ ಮಾಡಿಕೊಂಡಿದ್ದು, ಬಿಸಿಸಿಐ ಕಾರ್ಯವನ್ನು ಕೊಂಡಾಡಿದ್ದಾರೆ.