ಪುಣೆ :40 ಓವರ್ಗಳ ತನಕ ಸುರಕ್ಷಿತವಾಗಿ ಬ್ಯಾಟಿಂಗ್ ಮಾಡಬೇಕೆಂಬ ಭಾರತದ ಮನೋಭಾವನೆ ತವರಿನಲ್ಲಿ ನಡೆಯುವ 2023ರ ಏಕದಿನ ವಿಶ್ವಕಪ್ಗೆ ಭಾರಿ ಹಿನ್ನಡೆಯಾಗಲಿದೆ ಎಂದು ಇಂಗ್ಲೆಂಡ್ ಮಾಜಿ ನಾಯಕ ಮೈಕಲ್ ವಾನ್ ಎಚ್ಚರಿಕೆ ನೀಡಿದ್ದಾರೆ.
ಭಾರತ ಯಾವಾಗಲೂ ಕೊನೆಯ 10 ಓವರ್ಗಳಲ್ಲಿ ಆಕ್ರಮಣಕಾರಿ ಬ್ಯಾಟಿಂಗ್ ಮೂಲಕ ತ್ವರಿತ ರನ್ಗಳಿಸಲು ಮುಂದಾಗುತ್ತದೆ. ಇದು ಕೆಲವು ಬಾರಿ ಕೆಲಸ ಮಾಡಬಹುದು. ಆದರೆ, ವಿಶ್ವಚಾಂಪಿಯನ್ ಇಂಗ್ಲೆಂಡ್ ಬ್ಯಾಟಿಂಗ್ ಟ್ರ್ಯಾಕ್ನಲ್ಲಿ ಆರಂಭದಿಂದಲೇ ಆಕ್ರಮಣ ಆಟವನ್ನಾಡುವ ಮೂಲಕ ಭಾರತ ತನ್ನ ಮನೋಭಾವವನ್ನು ಬದಲಾಯಿಸಿಕೊಳ್ಳಲು ದಾರಿ ಮಾಡಿಕೊಟ್ಟಿದೆ.
ಭಾರತ ತಂಡ ಮೊದಲೆರಡು ಪಂದ್ಯಗಳಲ್ಲಿ ಇದೇ ಮಾರ್ಗ ಅನುಸರಿಸಿದೆ. ಎರಡೂ ಪಂದ್ಯಗಳಲ್ಲೂ ನಿಧಾನಗತಿಯ ಆರಂಭ ತೆಗೆದುಕೊಂಡು ಕೊನೆಯ 10 ಓವರ್ಗಳಲ್ಲಿ ಕ್ರಮವಾಗಿ 112 ಮತ್ತು 126 ರನ್ಗಳಿಸಿದೆ. ಆದರೆ, ವಾನ್ ಪ್ರಕಾರ ವಿರಾಟ್ ಕೊಹ್ಲಿ ಮತ್ತು ಅವರ ತಂಡದ ಪವರ್ಫುಲ್ ಬ್ಯಾಟ್ಸ್ಮನ್ಗಳನ್ನು ಹೊಂದಿರುವುದರಿಂದ ಆರಂಭದಿಂದಲೇ ಅಗ್ರೆಸ್ಸಿವ್ ಆಗಿ ಆಡಿ, ಇಂತಹ ಟ್ರ್ಯಾಕ್ನಲ್ಲಿ 375+ ಮೊತ್ತ ದಾಖಲಿಸಬಹುದಿತ್ತು ಎಂದಿದ್ದಾರೆ.
"ಈ ದಿನ ಭಾರತಕ್ಕೆ ಒಂದು ಪಾಠವಾಗಬೇಕು.... 40 ಓವರ್ಗಳವರೆಗೆ ಸುರಕ್ಷಿತವಾಗಿ ಬ್ಯಾಟಿಂಗ್ ಮಾಡುವುದರಿಂದ ಮುಂದಿನ 2 ವರ್ಷಗಳಲ್ಲಿ ತವರಿನಲ್ಲಿ ನಡೆಯುವ ವಿಶ್ವಕಪ್ನಲ್ಲಿ ಅವರಿಗೆ ಮುಳುವಾಗಬಹುದು.
ತಂಡದಲ್ಲಿ ಸಾಕಷ್ಟು ಸ್ಫೋಟಕ ಬ್ಯಾಟ್ಸ್ಮನ್ಗಳು ಮತ್ತು ಬ್ಯಾಟಿಂಗ್ ಆಳವನ್ನು ಹೊಂದಿರುವ ಭಾರತೀಯ ಪಡೆ 375+ ಸ್ಕೋರ್ಗಳಿಸಲು ಸಮರ್ಥವಾಗಿದೆ" ಎಂದು 2ನೇ ಪಂದ್ಯದ ನಂತರ ವಾನ್ ಟ್ವೀಟ್ ಮಾಡಿ ಭಾರತಕ್ಕೆ ಎಚ್ಚಿರಿಸಿದ್ದಾರೆ.