ಹೈದರಾಬಾದ್:ನ್ಯೂಜಿಲ್ಯಾಂಡ್ನಲ್ಲಿ ಸಾಮಾಜಿಕ ಅಂತರದ ನಿಯಮಗಳನ್ನು ಸಡಿಲಗೊಳಿಸುವ ಬಗ್ಗೆ ಪ್ರಧಾನಿ ಜಸಿಂಡಾ ಅರ್ಡೆರ್ನ್ ಮಾಹಿತಿ ನೀಡಿದ ನಂತರ ಟಿ-20 ವಿಶ್ವಕಪ್ ಸರಣಿ ನಡೆಸುವ ಬಗ್ಗೆ ಆಸ್ಟ್ರೇಲಿಯಾದ ಮಾಜಿ ಬ್ಯಾಟ್ಸ್‌ಮನ್ ಡೀನ್ ಜಾನ್ಸ್ ಪ್ರಶ್ನೆ ಮಾಡಿದ್ದಾರೆ.
ಟಿ-20 ವಿಶ್ವಕಪ್ ಅಕ್ಟೋಬರ್ 18 ರಿಂದ ನವೆಂಬರ್ 15 ರವರೆಗೆ ಆಸ್ಟ್ರೇಲಿಯಾದಲ್ಲಿ ನಡೆಸಲು ನಿರ್ಧರಿಸಲಾಗಿತ್ತು. ಆದರೆ, ಕೊರೊನಾ ವೈರಸ್ ಕಾರಣದಿಂದಾಗಿ ಟೂರ್ನಿ ನಡೆಯುವುದು ಅನುಮಾನವಾಗಿದೆ.
ನ್ಯೂಜಿಲ್ಯಾಂಡ್ ಕ್ರಿಕೆಟ್ ಮೈದಾನ ಮುಂದಿನ ವಾರ ಮೊದಲನೇ ಹಂತದ ಅಲರ್ಟ್ ನೀಡಬಹುದು ಎಂದು ಜಸಿಂಡಾ ಅರ್ಡೆರ್ನ್ ಹೇಳಿದ್ದಾರೆ. ಇದರರ್ಥ ಎಲ್ಲ ಸಾಮಾಜಿಕ ಅಂತರದ ಕ್ರಮಗಳು ಮತ್ತು ಸಾಮೂಹಿಕವಾಗಿ ಗುಂಪು ಸೇರುವುದರ ಮೇಲಿನ ನಿರ್ಬಂಧಗಳನ್ನು ತೆಗೆದುಹಾಕಲಾಗುವುದು ಎಂದು ಅವರು ಹೇಳಿದ್ದಾರೆ.
ಜಸಿಂಡಾ ಅರ್ಡೆರ್ನ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ ಟ್ವೀಟ್ ಮಾಡಿರುವ ಆಸ್ಟ್ರೇಲಿಯಾದ ಮಾಜಿ ಬ್ಯಾಟ್ಸ್‌ಮನ್ ಡೀನ್ ಜಾನ್ಸ್, ಬಹುಶಃ ನ್ಯೂಜಿಲ್ಯಾಂಡ್ನಲ್ಲಿ ಟಿ-20 ವಿಶ್ವಕಪ್ ಆಡಬಹುದೇ? ಎಂದು ಪ್ರಶ್ನೆಮಾಡಿದ್ದಾರೆ. ನ್ಯೂಜಿಲ್ಯಾಂಡ್ ಪ್ರಧಾನಿ ಜಸಿಂಡಾ ಅರ್ಡೆರ್ನ್ ಅವರು ಮೊದಲನೇ ಹಂತದ ಅಲರ್ಟ್ ಅಡಿ ವಿಮಾನಗಳಲ್ಲಿ ಸಾಮಾಜಿಕ ಅಂತರದ ಅಗತ್ಯವಿಲ್ಲ ಎಂದು ಘೋಷಿಸಿದ್ದಾರೆ ಅಂತ ವೆಬ್ಸೈಟ್ವೊಂದು ವರದಿ ಮಾಡಿದೆ.
ಕಳೆದ ವಾರ ಸಭೆ ನಡೆಸಿದ್ದ ಐಸಿಸಿ ಟಿ-20 ವಿಶ್ವಕಪ್ ಭವಿಷ್ಯದ ನಿರ್ಧಾರವನ್ನು ಜೂನ್ 10 ರವರೆಗೆ ಮುಂದೂಡಿದೆ. ಟಿ-20 ವಿಶ್ವಕಪ್ ಅನ್ನು ಮುಂದೂಡಲಾಗುವುದು ಎಂದು ಅನೇಕ ವರದಿಗಳು ಹೇಳಿವೆ. ಆದರೆ, ಈಗಿನವರೆಗೆ ಯಾವುದೇ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳಲಾಗಿಲ್ಲ ಎಂದು ಐಸಿಸಿ ಸ್ಪಷ್ಟಪಡಿಸಿದೆ.