ಮುಂಬೈ: ದೀರ್ಘಕಾಲದ ನಂತರ ಭಾರತ ಟಿ20 ತಂಡಕ್ಕೆ ಆಯ್ಕೆಯಾಗಿರುವ ಮುಂಬೈನ ಸೂರ್ಯಕುಮಾರ್ ಯಾದವ್ ಅವರು ಯುವಕರಿಗೆ ಮಾದರಿ ಎಂದು ಭಾರತದ ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ಅಭಿಪ್ರಾಯಪಟ್ಟಿದ್ದಾರೆ.
"ನನ್ನ ಪ್ರಕಾರ ಅವರು ಯುವಕರಿಗೆ ಉತ್ತಮ ಮಾದರಿಯಾಗಿದ್ದಾರೆ. ಭಾರತದಲ್ಲಿ ಯುವಜನತೆ ಬೇಗ ತಾಳ್ಮೆ ಕಳೆದುಕೊಳ್ಳುತ್ತಾರೆ. ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ರನ್ಗಳಿಸುವ ಪ್ರತಿಯೊಬ್ಬರೂ ಭಾರತ ತಂಡದಲ್ಲಿ ಆಡಲು ಬಯಸುತ್ತಾರೆ. ಅದು ತುಂಬಾ ಕಷ್ಟ. ಅಲ್ಲಿ ತುಂಬಾ ಗುಣಮಟ್ಟವಿದೆ, ತುಂಬಾ ಸಾಮರ್ಥ್ಯವಿರುತ್ತದೆ, ಮೇಲಾಗಿ ಪ್ರಬಲ ಸ್ಪರ್ಧೆಯಿರುತ್ತದೆ" ಎಂದು ಲಕ್ಷ್ಮಣ್ ಸ್ಟಾರ್ ಸ್ಪೋರ್ಟ್ಸ್ ಕನೆಕ್ಟೆಡ್ ಕಾರ್ಯಕ್ರಮದಲ್ಲಿ ತಿಳಿಸಿದ್ದಾರೆ.
ಆದರೆ ಸೂರ್ಯಕುಮಾರ್ ಏನು ಮಾಡಿದ್ರು? ಮತ್ತೆ ಪ್ರಥಮ ದರ್ಜೆ ಕ್ರಿಕೆಟ್ಗೆ ಹಿಂತಿರುಗಿ, ಮುಂಬೈ ತಂಡದಲ್ಲಿ ಸಾಕಷ್ಟು ಸ್ಕೋರ್ ಮಾಡಿದರು. ಮುಂಬೈ ಇಂಡಿಯನ್ಸ್ ತಂಡದಲ್ಲಿ ಅವಕಾಶ ಸಿಕ್ಕಾಗಲೆಲ್ಲಾ ಸಕಾರಾತ್ಮಕ ರನ್ಗಳಿಸಿದರು. ಸಾಕಷ್ಟು ಕಠಿಣ ಪರಿಸ್ಥಿತಿಯಲ್ಲಿ ತಂಡಕ್ಕಾಗಿ ಆಡಿ ಗೆಲುವು ತಂದುಕೊಟ್ಟರು. ಒಬ್ಬ ಆಟಗಾರನಿಂದ ನೀವು ನಿರೀಕ್ಷಿಸುವುದು ಕೂಡ ಅದನ್ನೇ. ಕೊನೆಯಲ್ಲಿ ನಮ್ಮ ಕೋಚ್ ನನಗೆ ಹೇಳಿದಂತೆ,"ಆಯ್ಕೆಗಾರರು ಬಾಗಿಲನ್ನು ತೆಗೆಯಲಿಲ್ಲ ಎಂದರೆ, ನೀವೇ ಬಾಗಿಲನ್ನು ಮುರಿದು ಹೋಗಬೇಕು". ಅದಕ್ಕಾಗಿ ನಿಮಗೆ ಉತ್ತಮ ಪ್ರದರ್ಶನ ತೋರುವುದೊಂದೇ ಮಾರ್ಗ. ಅದನ್ನೇ ಯಾದವ್ ಅನುಸರಿಸಿದರು. ಅವರು ಖಂಡಿತ ಭಾರತ ಟಿ20 ತಂಡದಲ್ಲಿ ಆಡುವುದಕ್ಕೆ ಅರ್ಹ ಆಟಗಾರ ಎಂದು ಲಕ್ಷ್ಮಣ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ದೆಹಲಿ ವಿರುದ್ಧ ಗೆದ್ದ ಯುಪಿಗೆ ಗುಜರಾತ್ ಸವಾಲು, ಕರ್ನಾಟಕಕ್ಕೆ ಮುಂಬೈ ಎದುರಾಳಿ