ಲಾಹೋರ್ (ಪಾಕಿಸ್ತಾನ):ಪಾಕಿಸ್ತಾನದಲ್ಲಿ ಕೊರೊನಾ ದಿನೇ ದಿನೆ ಏರಿಕೆಯಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಪಾಕ್ ಕ್ರಿಕೆಟ್ ಮೇಲೆಯೂ ದುಷ್ಪರಿಣಾಮ ಬೀರಿದೆ. ಹಣಕಾಸಿನ ತೊಂದರೆಯೂ ಕಾಣಿಸಿಕೊಂಡಿರುವ ಕಾರಣದಿಂದ ರಾಷ್ಟ್ರೀಯ ಕ್ರಿಕೆಟ್ ತಂಡಕ್ಕೆ ಯಾವುದೇ ಪ್ರಾಯೋಜಕತ್ವ ಕೂಡಾ ದೊರೆಯುತ್ತಿಲ್ಲ. ಪಾಕಿಸ್ತಾನ ಕ್ರಿಕೆಟ್ ಬೋರ್ಡ್ (ಪಿಸಿಬಿ) ಇತ್ತೀಚೆಗೆ ಪಾನೀಯ ಕಂಪನಿಯೊಂದರ ಪ್ರಾಯೋಜಕತ್ವ ಒಪ್ಪಂದದ ಬಳಿಕ ಯಾವುದೇ ಬೇರೆ ಪ್ರಾಯೋಜಕತ್ವಗಳು ಬಂದಿಲ್ಲ.
ಈ ಮೊದಲಿಗೆ ಮೂರು ವರ್ಷಕ್ಕೆ ಒಪ್ಪಂದಗಳನ್ನು ಪಿಸಿಬಿ ಮಾಡಿಕೊಳ್ಳುತ್ತಿತ್ತು. ಈಗ ಕೇವಲ ಒಂದು ವರ್ಷದ ಒಪ್ಪಂದಗಳಿಗೆ ಸಹಿ ಹಾಕುವಂತೆ ಕಂಪನಿಗಳು ಮಂಡಳಿಯನ್ನ ಒತ್ತಾಯಿಸುತ್ತಿವೆ.
ಕೇವಲ ಒಂದೇ ಒಂದು ಕಂಪನಿ ಪಿಸಿಬಿಗೆ ಪ್ರಾಯೋಜಕತ್ವ ನೀಡುವ ಬಿಡ್ನಲ್ಲಿ ಪಾಲ್ಗೊಂಡಿತ್ತು ಎಂದು ಕಳೆದ ವಾರವಷ್ಟೇ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಸ್ಪಷ್ಟನೆ ನೀಡಿತ್ತು. ಮೊದಲಿನ ಒಪ್ಪಂದಗಳಲ್ಲಿ ನಿಗದಿ ಮಾಡುತ್ತಿದ್ದ ದರಕ್ಕಿಂತ ಶೇಕಡಾ 30ರಷ್ಟು ದರಕ್ಕೆ ಒಪ್ಪಂದ ಮಾಡಿಕೊಳ್ಳುವಂತೆ ಪಾಯೋಜಕತ್ವಕ್ಕೆ ಮುಂದೆ ಬರುತ್ತಿರುವ ಕಂಪನಿಗಳು ಪಿಸಿಬಿಯನ್ನ ಒತ್ತಾಯ ಮಾಡುತ್ತಿವೆ ಎಂದು ಹೇಳಿಕೊಂಡಿದೆ.
ಪಾಕಿಸ್ತಾನ ತಂಡ ಈಗ ಇಂಗ್ಲೆಂಡಿನೊಂದಿಗೆ ಮೂರು ಟೆಸ್ಟ್ ಮ್ಯಾಚ್ಗಳನ್ನು ಹಾಗೂ ಹಲವು ಟಿ-20 ಮ್ಯಾಚ್ಗಳನ್ನು ಆಗಸ್ಟ್ ಮತ್ತು ಸೆಪ್ಟೆಂಬರ್ನಲ್ಲಿ ಆಡಲಿದೆ. ಈ ತಂಡದ ಕಿಟ್ಗಳ ಮೇಲೆ ಶಾಹೀದ್ ಅಫ್ರಿದಿ ಫೌಂಡೇಶನ್ನ ಲೋಗೋ ಇರಲಿದೆ. ಈ ಬಗ್ಗೆ ಶಾಹಿದ್ ಅಫ್ರಿದಿ ಟ್ವೀಟ್ ಮಾಡಿದ್ದಾರೆ.