ದುಬೈ: ರಾಹುಲ್ ತೆವಾಟಿಯಾ ಹಾಗೂ ರಿಯಾನ್ ಪರಾಗ್ ಅವರ ಅಮೋಘ ಆಟದ ಪರಿಣಾಮ ರಾಜಸ್ಥಾನ್ ತಂಡ ಸನ್ರೈಸರ್ಸ್ ಹೈದರಾಬಾದ್ ತಂಡವನ್ನು 5 ವಿಕೆಟ್ಗಳಿಂದ ಮಣಿಸಿ ಗೆಲುವಿನ ಹಾದಿಗೆ ಮರಳಿದೆ.
159 ರನ್ಗಳ ಸಾಧಾರಣ ಗುರಿ ಬೆನ್ನಟ್ಟಿದ ರಾಜಸ್ಥಾನ್ ರಾಯಲ್ಸ್ 78 ರನ್ಗಳಿಗೆ 5 ವಿಕೆಟ್ ಕಳೆದುಕೊಂಡು ಸೋಲಿನ ಸುಳಿಗೆ ಸಿಲುಕಿತ್ತು. ಆದರೆ ತೆವಾಟಿಯಾ ಹಾಗೂ ಪರಾಗ್ 6ನೇ ವಿಕೆಟ್ಗೆ ಮುರಿಯದ 85 ರನ್ಗಳ ಜೊತೆಯಾಟ ನಡೆಸಿ ರಾಜಸ್ಥಾನ ತಂಡಕ್ಕೆ ರೋಚಕ ಜಯ ತಂದುಕೊಟ್ಟರು.
ಆರಂಭಿಕರಾಗಿ ಕಣಕ್ಕಿಳಿದ ಬೆನ್ ಸ್ಟೋಕ್ಸ್(5), ಸ್ಟಿವ್ ಸ್ಮಿತ್ 5, ಬಟ್ಲರ್ 16, ಸಾಮ್ಸನ್ 26, ಉತ್ತಪ್ಪ 18 ರನ್ಗಳಿಸಿ ಬೇಗನೆ ವಿಕೆಟ್ ಒಪ್ಪಿಸಿದರು.
ಆದರೆ ತಾಳ್ಮೆಯಿಂದ ಜೊತೆಯಾಟ ಶುರು ಮಾಡಿದ ಈ ಜೋಡಿ ಒಂದೆರೆಡು ಓವರ್ಗಳವರೆಗೆ ಬೌಂಡರಿ ತಂಟೆಗೆ ಹೋಗದೆ ಸಿಂಗಲ್ಸ್ ರನ್ ತೆಗೆದುಕೊಂಡು ವಿಕೆಟ್ ಉಳಿಸಿಕೊಂಡರು. ಕೊನೆಯ 30 ಎಸೆತಗಳಲ್ಲಿ ಗೆಲುವಿಗೆ 65 ರನ್ಗಳ ಅಗತ್ಯವಿತ್ತು.
16ನೇ ಓವರ್ನಿಂದ ಚಾರ್ಜ್ ಮಾಡಿದ ಈ ಜೋಡಿ, ಖಲೀಲ್ ಓವರ್ನಲ್ಲಿ 11, ನಂತರ ಸಂದೀಪ್ ಎಸೆದ 17ನೇ ಓವರ್ನಲ್ಲಿ 18, 18ನೇ ಓವರ್ನಲ್ಲಿ ರಶೀದ್ ಖಾನ್ಗೆ 14, ಯಾರ್ಕರ್ ಕಿಂಗ್ ಎಂದೇ ಹೆಸರುವಾಸಿಯಾಗಿರುವ ನಟರಾಜನ್ ಎಸೆದ 19ನೇ ಓವರ್ನಲ್ಲಿ 14 ರನ್ ಚಚ್ಚಿದರು. ಕೊನೆಯ ಓವರ್ನಲ್ಲಿ ಗೆಲುವಿಗೆ ಅಗತ್ಯವಿದ್ದ 8 ರನ್ಗಳನ್ನು ಇನ್ನೂ ಒಂದು ಎಸೆತವಿರುವಂತೆಯೇ ಸಿಡಿಸಿ ತಂಡಕ್ಕೆ ಟೂರ್ನಿಯಲ್ಲಿ 3ನೇ ಗೆಲುವು ತಂದುಕೊಟ್ಟರು.
ಪರಾಗ್ 26 ಎಸೆತಗಳಲ್ಲಿ ತಲಾ 2 ಬೌಂಡರಿ ಹಾಗೂ ಸಿಕ್ಸರ್ ಸಹಿತ 42 ರನ್ಗಳಿಸಿದರೆ, ತೆವಾಟಿಯಾ 28 ಎಸೆತಗಳಲ್ಲಿ 4 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 45 ರನ್ಗಳಿಸಿ ಗೆಲುವಿನ ರೂವಾರಿಗಳಾದರು.
ಎಸ್ಆರ್ಹೆಚ್ ಪರ ಖಲೀಲ್ ಅಹ್ಮದ್ 2 ಹಾಗೂ ರಶೀದ್ ಖಾನ್ 2 ವಿಕೆಟ್ ಪಡೆದು ಮಿಂಚಿದರು.
ಇದಕ್ಕೂ ಮೊದಲು ಬ್ಯಾಟಿಂಗ್ ನಡೆಸಿದ್ದ ಸನ್ರೈಸರ್ಸ್ ಹೈದರಾಬಾದ್ ತಂಡ ಮನೀಶ್ ಪಾಂಡೆ 54 ಹಾಗೂ ವಾರ್ನರ್ 48 ರನ್ಗಳ ನೆರವಿನಿಂದ 20 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 158 ರನ್ಗಳಿಸಿತ್ತು.
ಟೂರ್ನಿಯಲ್ಲಿ ಬೆಸ್ಟ್ ಬೌಲರ್ಗಳೆಂದರೆ ಖ್ಯಾತರಾಗಿದ್ದ ರಶೀದ್ ಖಾನ್ ಓವರ್ನಲ್ಲಿ ಹ್ಯಾಟ್ರಿಕ್ ಬೌಂಡರಿ ಹಾಗೂ ನಟರಾಜನ್ ಓವರ್ನಲ್ಲಿ ತಲಾ ಒಂದು ಸಿಕ್ಸರ್ ಹಾಗೂ ಬೌಂಡರಿ ಸಹಿತ 14 ರನ್ಗಳಿಸಿದ ತೆವಾಟಿಯಾ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.