ಅಹ್ಮದಾಬಾದ್: ಇಂಗ್ಲೆಂಡ್ ವಿರುದ್ಧ 4ನೇ ಟೆಸ್ಟ್ನಲ್ಲಿ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ರಿಷಭ್ ಪಂತ್ ಸಿಡಿಸಿದ ಶತಕ ಭಾರತದಲ್ಲೇ 6ನೇ ಕ್ರಮಾಂಕದ ಬ್ಯಾಟ್ಸ್ಮನ್ರಿಂದ ಹೊರಬಂದ ಅತ್ಯುತ್ತಮ ಕೌಂಟರ್ ಅಟ್ಯಾಕ್ ಆಟ ಎಂದು ಕೋಚ್ ರವಿಶಾಸ್ತ್ರಿ ಆಭಿಪ್ರಾಯಪಟ್ಟಿದ್ದಾರೆ.
ಪಂತ್ ಸಿಡಿಸಿದ ಈ ಶತಕದಾಟದಲ್ಲಿ ಎಚ್ಚರಿಕೆ ಮತ್ತು ಆಕ್ರಮಣಶೀಲತೆ ಎರಡೂ ಸಮಪಾಲನ್ನು ಹೊಂದಿತ್ತು. ಪಂತ್ ಕೇವಲ 118 ಎಸೆತಗಳಲ್ಲಿ 101 ರನ್ ಗಳಿಸಿದರು. ಈ ಮೂಲಕ ಭಾರತ ತಂಡ ಇನ್ನಿಂಗ್ಸ್ ಮತ್ತು 25 ರನ್‌ಗಳಿಂದ ಕೊನೆಯ ಟೆಸ್ಟ್ ಪಂದ್ಯವನ್ನು ಗೆಲ್ಲುವಲ್ಲಿ ನಿರ್ಣಾಯಕ ಪಾತ್ರ ವಹಿಸಿದರು.
ಪಂತ್ ಆಟದ ಬಗ್ಗೆ ಪಂದ್ಯದ ನಂತರ ಮಾತನಾಡಿದ ರವಿಶಾಸ್ತ್ರಿ ಆತನ ಕಠಿಣ ಪರಿಶ್ರಮ ಫಲಿತಾಂಶವನ್ನು ತೋರಿಸುತ್ತಿದೆ ಎಂದು ಹೇಳಿದ್ದಾರೆ.
"ಅವನು (ಪಂತ್) ಕಳೆದು ಮೂರು ನಾಲ್ಕು ತಿಂಗಳಿನಿಂದ ಶ್ರಮಪಟ್ಟು ಕೆಲಸ ಮಾಡಿದ್ದಾನೆ. ಅದು ಈಗ ಫಲಿತಾಂಶಗಳನ್ನು ತೋರಿಸುತ್ತಿದೆ. ನಿನ್ನೆಯ ಅವನ ಇನ್ನಿಂಗ್ಸ್ ಅತ್ಯುತ್ತಮ ಪ್ರತಿದಾಳಿ ಮಾಡಿದ ಇನ್ನಿಂಗ್ಸ್. ಇದು ನಾನು ಭಾರತೀಯನಾಗಿ ಭಾರತದಲ್ಲಿ 6ನೇ ಕ್ರಮಾಂಕದ ಬ್ಯಾಟ್ಸ್ಮನ್ ಒಬ್ಬನಿಂದ ಕಂಡಂತಹ ಅತ್ಯುತ್ತಮ ಆಟ. ಅದರಲ್ಲೂ ಇಂತಹ ಟರ್ನಿಂಗ್ ಆಗುವ ಪಿಚ್ನಲ್ಲಿ ಪಂತ್ ಶತಕದಾಟ ಅತ್ಯುತ್ತಮ." ಎಂದು ಭಾರತ ತಂಡ ನಾಲ್ಕನೇ ಟೆಸ್ಟ್ ಗೆದ್ದ ನಂತರ ತಿಳಿಸಿದ್ದಾರೆ.
ಯಾವುದೂ ಸುಲಭವಾಗಿ ದೊರೆಯುವುದಿಲ್ಲ ಮತ್ತು ಆತ ಇನ್ನೂ ಸ್ವಲ್ಪ ಆಟವನ್ನು ಗೌರವಿಸಬೇಕು ಎಂದು ಹೇಳಿದ್ದೇವೆ. ಆತ ಸ್ವಲ್ಪ ತೂಕವನ್ನು ಕಳೆದುಕೊಳ್ಳಬೇಕಿದೆ ಮತ್ತು ಕೀಪಿಂಗ್ನಲ್ಲಿ ಇನ್ನೂ ಕಠಿಣ ಶ್ರಮವಹಿಸಿ ಕೆಲಸ ಮಾಡಬೇಕಿದೆ. ಅವನಲ್ಲಿ ಪ್ರತಿಭೆಯಿದೆ ಎಂದು ನಮಗೆ ತಿಳಿದಿದೆ. ಅವನೊಬ್ಬ ನಿಜವಾದ ಮ್ಯಾಚ್ವಿನ್ನರ್ ಮತ್ತು ಅದನ್ನು ತೋರಿಸಿಕೊಟ್ಟಿದ್ದಾನೆ ಎಂದು ಶಾಸ್ತ್ರಿ ಹೇಳಿದ್ದಾರೆ.