ನವದೆಹಲಿ:ಭಾರತ ತಂಡದ ಯುವ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ರಿಷಭ್ ಪಂತ್, ತಮ್ಮ ನೆಚ್ಚಿನ ಬ್ಯಾಟಿಂಗ್ ಪಾರ್ಟ್ನರ್ ಎಂಎಸ್ ಧೋನಿ ಎಂದಿದ್ದಾರೆ. ಆದರೆ, ಅವರ ಜೊತೆಗೆ ಹೆಚ್ಚಿನ ಸಮಯ ಬ್ಯಾಟಿಂಗ್ ಮಾಡಲು ಅವಕಾಶ ಸಿಕ್ಕಿಲ್ಲವಾದರೂ, ಸಿಕ್ಕಿರುವ ಕೆಲವೇ ಸಂದರ್ಭದಲ್ಲಿ ಅವರಿಂದ ಹೆಚ್ಚು ಕಲಿಯಲು ಪ್ರಯತ್ನಿಸಿದ್ದೇನೆ ಎಂದು ಅವರು ಹೇಳಿಕೊಂಡಿದ್ದಾರೆ.
ಧೋನಿ ನಂತರ ಭಾರತ ಕ್ರಿಕೆಟ್ನ ವಿಕೆಟ್ ಕೀಪರ್ ಸ್ಥಾನಕ್ಕೆ ಉತ್ತರಾಧಿಕಾರಿ ಎಂದೇ ಬಿಂಬಿತವಾಗಿದ್ದ ಪಂತ್ , ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಥಿರತೆ ಕಾಪಾಡಿಕೊಳ್ಳುವಲ್ಲಿ ವಿಫಲರಾದರು. ಅದಕ್ಕಾಗಿ ತಂಡದ ಆಡಳಿತ ಮಂಡಳಿ ಕಿವೀಸ್ ಸರಣಿಯಲ್ಲಿ ಪಂತ್ ಸ್ಥಾನಕ್ಕೆ ಕನ್ನಡಿಗ ಕೆಎಲ್ ರಾಹುಲ್ ಅವರನ್ನು ಆಯ್ಕೆ ಮಾಡಿದ್ದರು.
ಧೋನಿ ಜೊತೆ ಬ್ಯಾಟಿಂಗ್ ನಡೆಸುವಾಗ ನಾನ್ ಸ್ಟ್ರೈಕರ್ ಕೊನೆಯಲ್ಲಿ ನಿಂತಾಗ ಹೇಗಿರುತ್ತದೆ ಎಂದು ವಿವರಿಸಿರುವ ಪಂತ್, ಅಧಿಕ ಒತ್ತಡದಲ್ಲಿ ಚೇಸಿಂಗ್ ಮಾಡುವ ವೇಳೆ ಧೋನಿ ಅದ್ಭುತವಾಗಿ ಆಡುತ್ತಾರೆ ಎಂದು 21 ವರ್ಷದ ಆಟಗಾರ ಮೆಚ್ಚುಗೆಯ ಮಾತನಾಡಿದ್ದಾರೆ.
"ನನ್ನ ನೆಚ್ಚಿನ ಬ್ಯಾಟಿಂಗ್ ಪಾರ್ಟ್ನರ್ ಮಹಿ ಭಾಯ್(ಧೋನಿ). ಆದರೆ, ಅವರ ಜೊತೆ ಬ್ಯಾಟಿಂಗ್ ಮಾಡಲು ಹೆಚ್ಚು ಅವಕಾಶ ಸಿಗಲಿಲ್ಲ. ಅವರು ಮೈದಾನದಲ್ಲಿದ್ದರೆ ಎಲ್ಲವೂ ವಿಂಗಡಿಸಲ್ಪಟ್ಟಿರುತ್ತದೆ. ಅವರು ಯೋಜನೆಯನ್ನು ರೂಪಿಸುತ್ತಾರೆ. ನೀವು ಅದನ್ನು ಹಿಂಬಾಲಿಸಿಬೇಕು. ಅವರು ಕಾರ್ಯನಿರ್ವಹಣೆಯ ರೀತಿ ನಂಬಲಾಸಾಧ್ಯವಾಗಿರುತ್ತದೆ. ಅದರಲ್ಲೂ ಪ್ರಮುಖವಾಗಿ ಚೇಸಿಂಗ್ ಸಂದರ್ಭ ಅವರ ಯೋಜನೆಯನ್ನು ಊಹಿಸಲು ಸಾಧ್ಯ ಇರುವುದಿಲ್ಲ" ಎಂದು ಡೆಲ್ಲಿ ಕ್ಯಾಪಿಟಲ್ ಜೊತೆ ನಡೆಸಿದ ಟ್ವಿಟರ್ ಸಂವಾದದಲ್ಲಿ ಪಂತ್ ಹೇಳಿದ್ದಾರೆ.
ಪಂತ್ ತಂಡದ ಹಿರಿಯ ಬ್ಯಾಟ್ಸ್ಮನ್ಗಳ ಜೊತೆ ಆಡುವಾಗ ಕೂಡ ತಾವು ಎಂಜಾಯ್ ಮಾಡುತ್ತೇನೆ ಎಂದಿದ್ದಾರೆ. ನಾಯಕಿ ವಿರಾಟ್ ಹಾಗೂ ರೋಹಿತ್ ಶರ್ಮಾ ಜೊತೆ ಬ್ಯಾಟಿಂಗ್ ಮಾಡುವಾಗ ಹೊಸ ಅನುಭವ ನೀಡುತ್ತದೆ. ನೀವು ಅವರೊಂದಿಗೆ ಮೋಜು ಮಾಡಬಹುದು. ಅವರ ಮೆದುಳು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ತಿಳಿದುಕೊಳ್ಳಬಹುದು ಎಂದಿದ್ದಾರೆ.
ಇನ್ನು ಐಪಿಎಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಆಡುವ ಸಂದರ್ಭದಲ್ಲಿ ಶ್ರೇಯಸ್ ಅಯ್ಯರ್ ಹಾಗೂ ಶಿಖರ್ ಧವನ್ ಜೊತೆ ಆಡುವುದಕ್ಕೆ ಇಷ್ಟ ಎಂದು ಪಂತ್ ಹೇಳಿಕೊಂಡಿದ್ದಾರೆ.