ಕರಾಚಿ: ವಿದೇಶದಲ್ಲಿ ಕಠಿಣ ಸರಣಿಗಳನ್ನು ಎದುರಿಸಿದ ನಂತರ ದಕ್ಷಿಣ ಆಫ್ರಿಕಾ ವಿರುದ್ಧ ತವರಿನಲ್ಲಿ ಪಾಕಿಸ್ತಾನಕ್ಕೆ ಗೆಲುವು ಅಗತ್ಯವಾಗಿತ್ತು ಎಂದು ನಾಯಕ ಬಾಬರ್ ಅಜಮ್ ಹೇಳಿದ್ದಾರೆ.
ಶುಕ್ರವಾರ ಪಾಕಿಸ್ತಾನ ತಂಡ ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ 7 ವಿಕೆಟ್ಗಳಿಂದ ಗೆಲುವು ಸಾಧಿಸಿತ್ತು. ಈ ಸರಣಿಗೂ ಮುನ್ನ ಪಾಕಿಸ್ತಾನ ತಂಡ ಇಂಗ್ಲೆಂಡ್ ಮತ್ತು ಪಾಕಿಸ್ತಾನ ವಿರುದ್ಧ ಸತತ ಸರಣಿ ಸೋಲು ಕಂಡು ಅಭಿಮಾನಿಗಳ ಟೀಕೆಗೆ ಗುರಿಯಾಗಿತ್ತು. ಇದೀಗ 14 ವರ್ಷಗಳ ನಂತರ ಪಾಕ್ಗೆ ಪ್ರವಾಸ ಕೈಗೊಂಡಿದ್ದ ಆಫ್ರಿಕನ್ನರ ವಿರುದ್ಧ ಆತಿಥೇಯ ತಂಡ ಗೆಲುವಿನೊಂದಿಗೆ ತವರಿನಲ್ಲಿ ತನ್ನ ಗೆಲುವಿನ ಅಭಿಯಾನ ಆರಂಭಿಸಿದೆ.
"ನಮ್ಮ ತಂಡಕ್ಕೆ ಈ ಗೆಲುವಿನ ಅಗತ್ಯವಿತ್ತು. ಕಳೆದ ನ್ಯೂಜಿಲ್ಯಾಂಡ್ ಸರಣಿಯಲ್ಲಿ ನಾವು ಉತ್ತಮವಾಗಿ ಆಡಿರಲಿಲ್ಲ. ಇದೀಗ ದಕ್ಷಿಣ ಆಫ್ರಿಕಾದಂತಹ ಟಾಪ್ ತಂಡದ ವಿರುದ್ಧ ಗೆಲವು ಸಾಧಿಸಿರುವುದು ಖುಷಿ ತಂದಿದೆ. ಈ ಗೆಲುವಿನಲ್ಲಿ ನಮ್ಮ ವೇಗದ ಬೌಲರ್ಗಳು, ಫೀಲ್ಡರ್ಗಳು, ಸ್ಪಿನ್ನರ್ಸ್ ಮತ್ತು ಬ್ಯಾಟ್ಸ್ಮನ್ಗಳ ಪಾತ್ರವಿದೆ" ಎಂದು ಮೊದಲ ಪಂದ್ಯದ ನಂತರ ಬಾಬರ್ ಹೇಳಿದ್ದಾರೆ.
ನ್ಯೂಜಿಲ್ಯಾಂಡ್ ವಿರುದ್ಧ ಸರಣಿ ಸೋಲು ಕಂಡ ನಂತರ ಹಲವು ಮಾಜಿ ಕ್ರಿಕೆಟಿಗರು ಕೋಚ್ಗಳ ವಿರುದ್ಧ ಕಿಡಿಕಾರಿದ್ದರು. ಅದರಲ್ಲೂ ಮುಖ್ಯ ಕೋಚ್ ಮಿಸ್ಬಾ ಉಲ್ ಹಕ್ ಮತ್ತು ಬೌಲಿಂಗ್ ಕೋಚ್ ವಾಕರ್ ಯೂನಿಸ್ ವಿರುದ್ಧ ಟೀಕೆಗಳು ಹೆಚ್ಚಾಗಿ ಬಂದಿದ್ದವು.
ಈ ಸರಣಿಯಲ್ಲಿ ಮಿಸ್ಬಾ ಮತ್ತು ವಾಕರ್ ಹೆಚ್ಚು ತಲೆಕೆಡಿಸಿಕೊಂಡಿರಲಿಲ್ಲ. ಅವರು ಸೋಲಿನ ಭೀತಿ ಎದುರಿಸುತ್ತಿದ್ದಾರೆ ಎಂಬುದೆಲ್ಲಾ ಗಾಳಿ ಸುದ್ದಿಗಳು. ಅವರು ಡ್ರೆಸ್ಸಿಂಗ್ ರೂಮ್ನಲ್ಲಿ ಎಂದಿನಂತೆ ಇದ್ದರು. ಕೆಲವೊಮ್ಮೆ ಫಲಿತಾಂಶಗಳು ತಡವಾಗಿ ಬರುತ್ತವೆ. ಕೆಲವೊಮ್ಮೆ ಸರಣಿಗಳು ನಿಮ್ಮ ಪರವಾಗಿ ಹೋಗುವುದಿಲ್ಲ. ಹಾಗಾಗಿ ಸೋಲುಗಳಿಂದ ಪಾಠ ಕಲಿತು, ನಂತರ ಬಲಿಷ್ಠರಾಗಿ ಹಿಂತಿರುಗುವುದು ಮುಖ್ಯ ಎಂದು ಅವರು ಹೇಳಿದ್ದಾರೆ.
ಮೊದಲ ಟೆಸ್ಟ್ನಲ್ಲಿ ದಕ್ಷಿಣ ಆಫ್ರಿಕಾ 220 ರನ್ ಗಳಿಸಿದರೆ, ಇದಕ್ಕುತ್ತರವಾಗಿ ಪಾಕಿಸ್ತಾನ 378 ರನ್ ಗಳಿಸಿ 158 ರನ್ಗಳ ಮುನ್ನಡೆ ಸಾಧಿಸಿತ್ತು. ದಕ್ಷಿಣ ಆಫ್ರಿಕಾ 2ನೇ ಇನ್ನಿಂಗ್ಸ್ನಲ್ಲಿ 245 ರನ್ಗಳಿಗೆ ಆಲೌಟ್ ಆಗಿ ಆತಿಥೇಯ ತಂಡಕ್ಕೆ ಕೇವಲ 88 ರನ್ಗಳ ಗುರಿ ನೀಡಿತ್ತು. ಈ ಮೊತ್ತವನ್ನು ಪಾಕಿಸ್ತಾನ 3 ವಿಕೆಟ್ ಕಳೆದುಕೊಂಡು ತಲುಪಿತು.
ಇದನ್ನು ಓದಿ:ಸೋತರು, ಗೆದ್ದರೂ ಎದುರಾಳಿ ಆಟಗಾರರು ಹಾಗೂ ಆ ರಾಷ್ಟ್ರವನ್ನು ಗೌರವಿಸಬೇಕು: ಅಜಿಂಕ್ಯ ರಹಾನೆ