ನವದೆಹಲಿ: 2009ರಲ್ಲ ಶ್ರೀಲಂಕಾ ಆಟಗಾರರ ಮೇಲೆ ಉಗ್ರರು ದಾಳಿ ನಡೆಸಿದ ನಂತರ ಬರೋಬ್ಬರಿ 10 ವರ್ಷಗಳ ನಂತರ ಪಾಕಿಸ್ತಾನ ಕ್ರಿಕೆಟ್ ಮಂಡಳಿ ತವರಿನಲ್ಲಿ ಟೆಸ್ಟ್ ಕ್ರಿಕೆಟ್ ಆಯೋಜಿಸುತ್ತಿದೆ.
ಡಿಸೆಂಬರ್ನಲ್ಲಿ ಪಾಕ್ ತವರಿನಲ್ಲಿ ಶ್ರೀಲಂಕಾ ವಿರುದ್ಧ ಎರಡು ಪಂದ್ಯಗಳ ಟೆಸ್ಟ್ ಸರಣಿ ಆಯೋಜಿಸಲಾಗುವುದು ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ) ಘೋಷಿಸಿದೆ.
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಪಾಕ್ ಅವತರಣಿಕೆಯನ್ನು ರಾವಲ್ಪಿಂಡಿಯ ಪಿಂಡಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಆಯೋಜಿಸಿದೆ. ಡಿಸೆಂಬರ್ 11-15ರವರೆಗೆ ಮೊದಲ ಟೆಸ್ಟ್, ಡಿ19-23ರ ವರೆಗೆ ಕರಾಚಿ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಎರಡನೇ ಟೆಸ್ಟ್ ನಡೆಯಲಿದೆ.
2009ರಲ್ಲಿ ಶ್ರೀಲಂಕಾ ಆಟಗಾರರಿದ್ದ ಬಸ್ ಮೇಲೆ ಉಗ್ರರು ದಾಳಿ ನಡೆಸಿದ್ದರು. ನಂತರ ಯಾವ ಕ್ರಿಕೆಟ್ ರಾಷ್ಟ್ರವೂ ಕೂಡಾ ಪಾಕಿಸ್ತಾನದಲ್ಲಿ ಕಾಲಿಟ್ಟಿರಲಿಲ್ಲ. ಪಾಕಿಸ್ತಾನದ ತವರಿನ ಎಲ್ಲಾ ಪಂದ್ಯಗಳು ಯುಎಇನಲ್ಲಿ ನಡೆಯುತ್ತಿದ್ದವು. ಇದೀಗ ಶ್ರೀಲಂಕಾ ಕ್ರಿಕೆಟ್ ಮಂಡಳಿ ಮತ್ತೆ ತನ್ನ ಆಟಗಾರರನ್ನು ಪಾಕಿಸ್ತಾನಕ್ಕೆ ಕಳುಹಿಸಲು ನಿರ್ಧರಿಸಿದೆ. ಆದರೆ ಈ ಬಾರಿ ಯಾವ ಆಟಗಾರರು ಭದ್ರತೆ ನೆಪವೊಡ್ಡಿ ಸರಣಿಯಿಂದ ಹೊರಬರ್ತಾರೋ ಅನ್ನುವುದನ್ನು ಕಾದು ನೋಡಬೇಕಿದೆ.
ಸೆಪ್ಟೆಂಬರ್ನಲ್ಲಿ ಶ್ರೀಲಂಕಾ ಅನನುಭವಿಗಳ ತಂಡ ಪಾಕ್ ಪ್ರವಾಸ ಕೈಗೊಂಡಿತ್ತು. ಈ ಸಂದರ್ಭದಲ್ಲಿ ಏಕದಿನ ಸರಣಿಯನ್ನು ಪಾಕ್ ಜಯಿಸಿದರೆ, ಟಿ20 ಸರಣಿಯನ್ನು ಶ್ರೀಲಂಕಾ ಕ್ಲೀನ್ಸ್ವೀಪ್ ಸಾಧಿಸಿ ಇತಿಹಾಸ ನಿರ್ಮಿಸಿತ್ತು.