ಮ್ಯಾಂಚೆಸ್ಟರ್: ಭಾರತದ ವಿರುದ್ಧ ಪಾಕಿಸ್ತಾನ ತಂಡ ಸೋಲನುಭವಿಸುವುದಕ್ಕೆ ಕಾರಣ ತಂಡದಲ್ಲಿ ಒಗ್ಗಟ್ಟಿಲ್ಲದಿರುವುದು ಎಂದು ಪಾಕಿಸ್ತಾನ ಮಾಧ್ಯಮಗಳು ಕಿಡಿಕಾರಿವೆ.
ಪಾಕಿಸ್ತಾನ ತಂಡ ಒಡೆದು ಹೋಳಾಗಿದೆ. ತಂಡದಲ್ಲಿರುವ ಅರ್ಧ ಆಟಗಾರರು ಸ್ಪಿನ್ನರ್ ಇಮಾದ್ ವಾಸಿಂ ಬಣಕ್ಕೂ, ಇನ್ನರ್ಧದಷ್ಟು ಆಟಗಾರರು ಮೊಹಮ್ಮದ್ ಅಮೀರ್ ಬಣಕ್ಕೂ ಸೇರಿ ತಂಡವನ್ನು ಒಡೆದಿದ್ದಾರೆ. ತಂಡದ ನಾಯಕ ಸರ್ಫರಾಜ್ ಏಕಾಂಗಿಯಾಗಿದ್ದು, ಇವರಿಗೆ ಇತರ ಆಟಗಾರರು ಸಹಕರಿಸುತ್ತಿಲ್ಲ ಎಂದು ಪಾಕಿಸ್ತಾನದ ಕೆಲವು ಪತ್ರಿಕೆಗಳು, ಟಿವಿ ಮಾಧ್ಯಮಗಳು ಆರೋಪಿಸಿವೆ.
ಭಾರತ ತಂಡದ ವಿರುದ್ಧ ಔಟಾದ ತಕ್ಷಣ ಡ್ರೆಸಿಂಗ್ ರೂಮಿಗೆ ತೆರಳಿದ ಸರ್ಫರಾಜ್ ಅಹ್ಮದ್ ಸಹ ಆಟಗಾರರಾದ ಅಮೀರ್, ಇಮಾದ್ ವಾಸಿಮ್, ಇಮಾಮ್ ಉಲ್ ಹಕ್ ವಿರುದ್ಧ ಕೋಪಗೊಂಡು ಬೈದಿರುವುದು ಬಹಿರಂಗವಾದ ಹಿನ್ನಲೆ, ಪಾಕಿಸ್ತಾನ ತಂಡದಲ್ಲಿ ಒಗ್ಗಟ್ಟಿಲ್ಲ ಎಂಬುದನ್ನು ನಿರೂಪಿಸಿದೆ.
ಇದಲ್ಲದೇ ಪಾಕಿಸ್ತಾನದ ಅಭಿಮಾನಿಯೊಬ್ಬ ಶೋಯಬ್ ಮಲಿಕ್, ಇಮಾಮ್ , ಅಮೀರ್ ಹಾಗೂ ವಾಸಿಮ್ ಸರ್ಫರಾಜ್ ವಿರುದ್ಧ ಗುಂಪುಗಾರಿಕೆ ಮಾಡುತ್ತಿದ್ದಾರೆ ಎಂದು ಧ್ವನಿ ಸಂದೇಶವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಇದು ವೈರಲ್ ಆಗುತ್ತಿದ್ದಂತೆ ಹಲವು ಪಾಕ್ ಮಾಧ್ಯಮಗಳು ಕೂಡ ತಂಡದಲ್ಲಿ ಆಂತರಿಕ ಸಮಸ್ಯೆಯಿದೆ ಎಂದು ಸುದ್ದಿ ಮಾಡಿವೆ.
ಇದಕ್ಕೆ ಪುಷ್ಠಿ ನೀಡುವಂತೆ ವೇಗಿ ಅಮೀರ್ ಕೂಡ ಮೈದಾನದಲ್ಲೇ ಭಾರತದ ವಿರುದ್ಧ ಸೋಲಿಗೆ ನಾನು ಕಾರಣನಲ್ಲ ಎಂದು ಕೂಗಾಡಿದ್ದು, ಸಹ ಸುದ್ದಿಯಾಗಿತ್ತು.
ಒಟ್ಟಾರೆ ತಂಡದಲ್ಲಿರುವ ಒಡಕಿನಿಂದ ಸತತ ಎರಡು ಸೋಲು ಕಂಡಿದ್ದಕ್ಕಿಂತ ಭಾರತದ ವಿರುದ್ಧ ಸೋತಿದ್ದನ್ನು ಪಾಕ್ ಅಭಿಮಾನಿಗಳ ಕೈಯ್ಯಲ್ಲಿ ಸಹಿಸಿಕೊಳ್ಳಲಾಗುತ್ತಿಲ್ಲ. ಇದೀಗ ಬಣ ರಾಜಕೀಯ ಬಹಿರಂಗಗೊಳ್ಳುತ್ತಿದ್ದಂತೆ ತಮ್ಮ ಕ್ರಿಕೆಟ್ ತಂಡದ ಆಟಗಾರರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ವಿಶ್ವಕಪ್ನಲ್ಲಿ ಪಾಕ್ ತಂಡ ಈಗಾಗಲೇ ನಾಲ್ಕು ಪಂದ್ಯಗಳಲ್ಲಿ ಸೋಲು ಕಂಡಿದ್ದು, ಸೆಮಿಫೈನಲ್ಗೆ ಲಗ್ಗೆಯಿಡುವುದು ಬಹುತೇಕ ಅಸಾಧ್ಯ ಎಂದು ಹೇಳಲಾಗುತ್ತಿದೆ.