ಕರಾಚಿ:ಕೊರೊನಾ ಮಹಾಮಾರಿ ಬಳಿಕ ಪಾಕಿಸ್ತಾನದಲ್ಲಿ ಇದೇ ಮೊದಲ ಬಾರಿಗೆ ಕ್ರಿಕೆಟ್ ಟೂರ್ನಿ ವೀಕ್ಷಣೆ ಮಾಡಲು ಕ್ರೀಡಾಭಿಮಾನಿಗಳಿಗೆ ಅವಕಾಶ ನೀಡಲಾಗುತ್ತಿದ್ದು, ನಾಳೆಯಿಂದ ಪಾಕಿಸ್ತಾನ ಸೂಪರ್ ಲೀಗ್ ಟಿ-20 ಟೂರ್ನಿ ಆರಂಭಗೊಳ್ಳುತ್ತಿದೆ.
ನಾಳೆಯಿಂದ ಪಾಕ್ ಟಿ - 20 ಟೂರ್ನಿ ಆರಂಭ.. ವೀಕ್ಷಕರಿಗೆ ಅವಕಾಶ!
ಪಾಕಿಸ್ತಾನ ಕ್ರಿಕೆಟ್ ಟೂರ್ನಿ ವೀಕ್ಷಣೆ ಮಾಡಲು ಅಭಿಮಾನಿಗಳಿಗೆ ಅವಕಾಶ ನೀಡಲಾಗಿದ್ದು, ಕೊರೊನಾ ನಿಯಮಾವಳಿ ಅನುಸರಣೆ ಮಾಡುವುದು ಕಡ್ಡಾಯವಾಗಿದೆ.
ಈಗಾಗಲೇ ಪಾಕಿಸ್ತಾನದಲ್ಲಿ ನಡೆದ ಜಿಂಬಾಬ್ವೆ ಹಾಗೂ ದಕ್ಷಿಣ ಆಫ್ರಿಕಾ ಕ್ರಿಕೆಟ್ ಸರಣಿ ಖಾಲಿ ಮೈದಾನದಲ್ಲಿ ನಡೆದಿದ್ದು, ಇದೇ ಪ್ರಥಮ ಬಾರಿಗೆ ಕ್ರಿಕೆಟ್ ವೀಕ್ಷಣೆ ಮಾಡಲು ಅಭಿಮಾನಿಗಳಿಗೆ ಅವಕಾಶ ನೀಡಲಾಗಿದೆ. ಕ್ರಿಕೆಟ್ ಪಂದ್ಯ ವೀಕ್ಷಣೆ ಮಾಡಲು ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಕೇವಲ 20 ಪ್ರತಿಶತ ಅಭಿಮಾನಿಗಳಿಗೆ ಅವಕಾಶ ನೀಡಲಾಗಿದ್ದು, ಸಾಮಾಜಿಕ ಅಂತರ ಹಾಗೂ ಮಾಸ್ಕ್ ಹಾಕಿಕೊಳ್ಳುವುದು ಕಡ್ಡಾಯವಾಗಿದೆ.
ಕರಾಚಿ ರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ 7,500 ವೀಕ್ಷಕರು ಹಾಗೂ ಗಡಾಫಿ ಸ್ಟೇಡಿಯಂನಲ್ಲಿ 5,500 ಅಭಿಮಾನಿಗಳು ಇದೀಗ ಕುಳಿತುಕೊಂಡು ಕ್ರಿಕಟ್ ಪಂದ್ಯ ವೀಕ್ಷಣೆ ಮಾಡಬಹುದಾಗಿದೆ. ಪಾಕ್ ಕ್ರಿಕೆಟ್ ಲೀಗ್ನಲ್ಲಿ ಆರು ತಂಡಗಳು ಭಾಗಿಯಾಗಲಿದ್ದು, ಕ್ರಿಸ್ ಗೇಲ್, ಬೆನ್ ಡಕ್, ಕ್ರಿಸ್ ಲಿನ್, ರಾಶೀದ್ ಖಾನ್ ಸೇರಿದಂತೆ ಅನೇಕ ಸ್ಟಾರ್ ಪ್ಲೇಯರ್ಸ್ ಭಾಗಿಯಾಗುತ್ತಿದ್ದಾರೆ. ನಾಳೆಯಿಂದ ಆರಂಭಗೊಳ್ಳಲಿರುವ ಪಾಕ್ ಟಿ-20 ಟೂರ್ನಿಯ ಫೈನಲ್ ಪಂದ್ಯ ಮಾರ್ಚ್ 22ರಂದು ನಡೆಯಲಿದೆ.