ಹೈದರಾಬಾದ್:ಪಾಕಿಸ್ತಾನ ತಂಡ ವಿಶ್ವಕಪ್ ಟೂರ್ನಿಯ ಬಳಿಕವೂ ಹೇಳಿಕೊಳ್ಳುವಂತಹ ಪ್ರದರ್ಶನ ನೀಡುತ್ತಿಲ್ಲ. ತವರಿನಲ್ಲಿ ಶ್ರೀಲಂಕಾ ವಿರುದ್ಧ ಸಮಾಧಾನಕರವಾಗಿ ಆಡಿದ್ದ ಪಾಕ್ ಆಟಗಾರರು ಆಸ್ಟ್ರೇಲಿಯಾ ಪ್ರವಾಸದ ಟೆಸ್ಟ್ ಸರಣಿಯಲ್ಲಿ ವೈಟ್ವಾಶ್ ಆಗಿದ್ದಾರೆ.
ತಮ್ಮ ತಂಡ ನೀರಸ ಪ್ರದರ್ಶನ ನೀಡುತ್ತಿರುವುದು ಅಭಿಮಾನಿಗಳಿಗೆ ಸಹಜವಾಗಿಯೇ ಬೇಸರ ತರಿಸಿದೆ. ಪಾಕಿಸ್ತಾನಿ ಕ್ರಿಕೆಟಿಗರು ನೇಪಾಳ ತಂಡದ ಆಟಗಾರರನ್ನು ನೋಡಿ ಕಲಿಯಲಿ ಎಂದು ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳು ಬುದ್ಧಿವಾದ ಹೇಳಿದ್ದಾರೆ.
ಹಿನ್ನೆಲೆ:
ನೇಪಾಳಿ ಕ್ರಿಕೆಟರ್ ಸಂದೀಪ್ ಲಮಿಚಾನೆ ಸದ್ಯ ವಿಶ್ವದ ಎಲ್ಲಾ ಟಿ-20 ಲೀಗ್ ಆಡುತ್ತಾ ಗಮನ ಸೆಳೆಯುತ್ತಿದ್ದಾರೆ. 2018ರಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ಪರ ಆಡಿದ್ದ ಲಮಿಚಾನೆ ನಂತರದಲ್ಲಿ ಬಿಗ್ಬ್ಯಾಷ್, ಕೆರೆಬಿಯನ್ ಪ್ರೀಮಿಯರ್ ಲೀಗ್, ಬಾಂಗ್ಲಾದೇಶ ಪ್ರೀಮಿಯರ್ ಲೀಗ್, ಪಾಕಿಸ್ತಾನ ಪ್ರೀಮಿಯರ್ ಲೀಗ್ನಲ್ಲಿ ಮಿಂಚು ಹರಿಸಿದ್ದಾರೆ.
ನೇಪಾಳಿ ಬೌಲರ್ ಸಂದೀಪ್ ಲಮಿಚಾನೆ ಇದೇ ಸಂದೀಪ್ ಲಮಿಚಾನೆ ಸಂದರ್ಶನವೊಂದರಲ್ಲಿ ತಮ್ಮ ಆಸೆಯೊಂದನ್ನು ವ್ಯಕ್ತಪಡಿಸಿದ್ದಾರೆ. ನಾನು ನೂರಾರು ಟಿ-20 ಲೀಗ್ ಆಡಬಲ್ಲೆ. ಆದರೆ ನೇಪಾಳ ತಂಡದ ಪರವಾಗಿ ಒಂದಾದರೂ ಟೆಸ್ಟ್ ಆಡುವ ಮಹದಾಸೆ ನನಗಿದೆ. ಆ ಏಕೈಕ ಟೆಸ್ಟ್ ನನ್ನ ಕರಿಯರ್ ಪೂರ್ಣ ಮಾಡಬಲ್ಲುದು ಎಂದು ಹೇಳಿದ್ದರು.
ಲಮಿಚಾನೆ ಸಂದರ್ಶನದ ಭಾಗವೊಂದನ್ನು ಪಾಕ್ ಪತ್ರಕರ್ತ ಸಾಜ್ ಸಾದಿಕ್ ರಿಟ್ವೀಟ್ ಮಾಡಿದ್ದರು. ಇದನ್ನೇ ಅಸ್ತ್ರ ಮಾಡಿಕೊಂಡ ಪಾಕ್ ಕ್ರಿಕೆಟ್ ಅಭಿಮಾನಿಗಳು ತಮ್ಮ ಆಟಗಾರರಿಗೆ ಸಂದೀಪ್ ಲಮಿಚಾನೆಯನ್ನು ನೋಡಿ ಕಲಿಯುವಂತೆ ಸಲಹೆ ನೀಡಿದ್ದಾರೆ.
ಪಾಕ್ ಬೌಲರ್ ಮೊಹಮ್ಮದ್ ಅಮೀರ್ ಇತ್ತೀಚೆಗೆ ಟೆಸ್ಟ್ ಮಾದರಿಗೆ ವಿದಾಯ ಹೇಳಿದ್ದರು. ಇನ್ನೋರ್ವ ವೇಗಿ ವಹಾಬ್ ರಿಯಾಜ್ ಅನಿರ್ದಿಷ್ಟಾವಧಿಗೆ ಟೆಸ್ಟ್ನಿಂದ ದೂರ ಉಳಿದಿದ್ದಾರೆ. ಈ ಇಬ್ಬರೂ ಆಟಗಾರರ ಮೇಲೆ ಪಾಕ್ ಕ್ರಿಕೆಟ್ ಫ್ಯಾನ್ಸ್ ಆಕ್ರೋಶಭರಿತರಾಗಿ ಲಮಿಚಾನೆಯನ್ನು ಉದಾಹರಣೆಯಾಗಿಸಿ ಟ್ವೀಟ್ ಮಾಡಿದ್ದಾರೆ.