ಕರಾಚಿ:ಐಸಿಸಿ ವಿಶ್ವಕಪ್ನಲ್ಲಿ ಟೀಂ ಇಂಡಿಯಾ, ಪಾಕ್ ವಿರುದ್ಧ ಸೋಲಿಲ್ಲದ ಸರದಾರನಾಗಿ ಅಬ್ಬರಿಸುತ್ತಿದ್ದು, ಇಲ್ಲಿಯವರೆಗೆ ನಡೆದ ಏಳು ಪಂದ್ಯಗಳಲ್ಲೂ ಗೆಲುವು ದಾಖಲು ಮಾಡಿದೆ. ಇದರಿಂದ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಕೂಡ ಕಂಗೆಟ್ಟು ಹೋಗಿದೆ.
ಮೊನ್ನೆ ಭಾನುವಾರ ನಡೆದ ಇಂಡೋ - ಪಾಕ್ ಪಂದ್ಯದಲ್ಲಿ ಸರ್ಫರಾಜ್ ಅಹ್ಮದ್ ನೇತೃತ್ವದ ತಂಡ ಹೀನಾಯ ಸೋಲು ಕಂಡಿದೆ. ಇದರಿಂದ ತಂಡದಲ್ಲಿ ಬಿರುಕು ಉಂಟಾಗಿರುವ ವಿಷಯ ಕೂಡ ಎಲ್ಲರಿಗೂ ಗೊತ್ತಾಗಿದೆ. ಇದೀಗ ಎಚ್ಚೆತ್ತುಕೊಂಡಿರುವ ಪಿಸಿಬಿ, ಮುಂದಿನ ಪಂದ್ಯಗಳಲ್ಲಿ ಸರಿಯಾದ ಪ್ರದರ್ಶನ ನೀಡಿ, ಇಲ್ಲವೇ ಪರಿಣಾಮ ಎದುರಿಸಿ ಎಂದು ಪಾಕ್ ತಂಡಕ್ಕೆ ಪಿಸಿಬಿ ವಾರ್ನ್ ಮಾಡಿದೆ.
ಟೀಂ ಇಂಡಿಯಾ ವಿರುದ್ಧ ಪಾಕ್ ಸೋಲು ಕಂಡ ಬಳಿಕ ಇಂದು ಪಾಕ್ ಕ್ರಿಕೆಟ್ ಮಂಡಳಿ ಸಭೆ ನಡೆಸಿತ್ತು. ಇದಾದ ಬಳಿಕ ಪಾಕ್ ಮಂಡಳಿ ಚೇರ್ಮನ್ ಇಶಾನ್ ಮಣಿ ತಂಡದ ನಾಯಕ ಸರ್ಫರಾಜ್ ಅಹ್ಮದ್ಗೆ ಫೋನ್ ಮಾಡಿದ್ದು, ಮುಂದಿನ ಪಂದ್ಯಗಳಲ್ಲಿ ಉತ್ತಮವಾದ ಪ್ರದರ್ಶನ ನೀಡುವಂತೆ ಸೂಚನೆ ನೀಡಿದ್ದಾರೆ. ಜತೆಗೆ ಸುದ್ದಿವಾಹಿನಿಗಳು ಬಿತ್ತರಿಸುತ್ತಿರುವ ವರದಿ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ. ಶಾಂತವಾಗಿದ್ದು, ಮುಂದಿನ ಪಂದ್ಯಗಳ ಮೇಲೆ ಗಮನ ಹರಿಸಿ ಎಂದು ಸೂಚನೆ ನೀಡಿದ್ದು, ತಂಡದಲ್ಲಿ ಯಾವುದೇ ರೀತಿಯ ಭಿನ್ನಾಭಿಪ್ರಾಯ ಕಂಡು ಬರದಂತೆ ನೋಡಿಕೊಳ್ಳಿ ಎಂದು ತಿಳಿಸಿದ್ದಾರೆ.
ಇನ್ನು ಟೀಂ ಇಂಡಿಯಾ ವಿರುದ್ಧ ಪಾಕ್ ಸೋಲು ಕಂಡ ಬಳಿಕ ಡ್ರೆಸ್ಸಿಂಗ್ ರೂಂನಲ್ಲಿ ಸರ್ಫರಾಜ್ ಅಹ್ಮದ್ ಸಹ ಆಟಗಾರರ ಮೇಲೆ ಕೂಗಾಡಿದ್ದರು. ಹೀಗಾಗಿ ತಂಡ ಮೂರು ವಿಭಾಗಗಳಾಗಿ ಒಡೆದಿತ್ತು ಎಂಬ ಸುದ್ದಿ ಸಹ ಅಲ್ಲಿನ ಮಾಧ್ಯಮಗಳಲ್ಲಿ ಪ್ರಸಾರವಾಗಿತ್ತು.