ಕರಾಚಿ:ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಫವಾದ್ ಆಲಂ ಶತಕ ಗಳಿಸುವ ಮೂಲಕ ಪಾಕಿಸ್ತಾನವನ್ನು ಸಂಕಷ್ಟದಿಂದ ರಕ್ಷಿಸಿದಂತಾಗಿದೆ. ಫವಾದ್ ಆಲಂ ಆಟಕ್ಕೆ ಫಿದಾ ಆದ ವೇಗಿ ವಹಾಬ್ ರಿಯಾಜ್, 11 ವರ್ಷಗಳ ನಂತರ ಪಾಕಿಸ್ತಾನ ತಂಡ ಕರೆಸಿಕೊಂಡ ಬ್ಯಾಟ್ಸ್‌ಮನ್‌ನ ಬದ್ಧತೆ ವಿವರಿಸಲು ಪದಗಳೇ ಸಾಲುತ್ತಿಲ್ಲವೆಂದು ಹೇಳಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಎರಡನೇ ದಿನದಂದು ಫವಾದ್ ಮತ್ತು ಫಹೀಮ್ ಅಶ್ರಫ್ ಕ್ರಮವಾಗಿ 109 ಮತ್ತು 64 ರನ್ ಗಳಿಸಿದರು. ವಹಾಬ್ ಈ ಇಬ್ಬರ ಆಟವನ್ನು ಹಾಡಿ ಹೊಗಳಿದ್ದಾರೆ.
ಫವಾದ್ ಆಲಂ ಆಟ ಅದ್ಭುತವಾಗಿತ್ತು. ಬದ್ಧತೆ, ಸಮರ್ಪಣೆ, ದೃಢ ನಿರ್ಧಾರ, ಸ್ಥಿರ ಪ್ರದರ್ಶನ ಮತ್ತು ದೇಶಿಯ ಕ್ರೀಡೆಯಲ್ಲಿ 10 ವರ್ಷಗಳ ಕಠಿಣ ಪರಿಶ್ರಮ ಅವರಿಗೆ ಮುಂದಿನ ದಾರಿ ತೋರಿಸಿದೆ. ಅವರು ಹೀಗೆ ಮುನ್ನುಗ್ಗುತ್ತಿರಲಿ ಎಂದು ವಹಾಬ್ ಟ್ವೀಟ್ ಮಾಡಿದ್ದಾರೆ.
ನವೆಂಬರ್ 2009 ರಲ್ಲಿ ಪಾಕಿಸ್ತಾನದ ಡುನೆಡಿನ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಪಂದ್ಯವೊಂದರಲ್ಲಿ ಫವಾದ್ ಕಾಣಿಸಿಕೊಂಡಿದ್ದರು. ಜುಲೈ 2009 ರಲ್ಲಿ ಅವರು ಟೆಸ್ಟ್ಗೆ ಎಂಟ್ರಿ ಕೊಟ್ಟಿದ್ದರು.
ಫವಾದ್ ಆಲಂ ಅವರ ಭರ್ಜರಿ ಶತಕದ ನೆರವಿನಿಂದ ದಕ್ಷಿಣ ಅಫ್ರಿಕಾ ವಿರುದ್ಧದ ಮೊದಲ ಟೆಸ್ಟ್ನಲ್ಲಿ ಪಾಕಿಸ್ತಾನ ತಂಡ 308/8 ರನ್ ಗಳಿಸಿದ್ದು 88 ರನ್ಗಳ ಮುನ್ನಡೆಯೊಂದಿಗೆ 3ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದಿರಿಸಿಕೊಂಡಿದೆ.