ನವದೆಹಲಿ: ಭಾರತ ತಂಡದ ವೇಗದ ಬೌಲಿಂಗ್ ದಾಳಿಯ ಪ್ರಮುಖ ಅಸ್ತ್ರವಾಗಿರುವ ಜಸ್ಪ್ರೀತ್ ಬುಮ್ರಾರಿಗೆ ಹೆಚ್ಚಿನ ಹೊರೆ ನೀಡದೆ ಜೋಪಾನ ಮಾಡಿಕೊಳ್ಳಿ ಎಂದು ಮಾಜಿ ಆರಂಭಿಕ ಬ್ಯಾಟ್ಸ್ಮನ್ ಗೌತಮ್ ಗಂಭೀರ್ ಟೀಮ್ ಮ್ಯಾನೇಜ್ಮೆಂಟ್ಗೆ ಸಲಹೆ ನೀಡಿದ್ದಾರೆ.
ಜಸ್ಪ್ರೀತ್ ಬುಮ್ರಾ ಐಪಿಎಲ್ ಶುರುವಾದಂದಿನಿಂದ ಇಲ್ಲಿಯವರೆಗೆ ಬಿಡುವಿಲ್ಲದೆ ಕ್ರಿಕೆಟ್ ಆಡುತ್ತಿದ್ದಾರೆ. ಈ ಕೆಲಸದ ಒತ್ತಡದಿಂದ ಈಗಾಗಲೇ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟೆಸ್ಟ್ ಗಾಯಗೊಂಡು ನಾಲ್ಕನೇ ಟೆಸ್ಟ್ನಿಂದ ಹೊರಗುಳಿಯಲಿದ್ದಾರೆ. ಅದಕ್ಕಾಗಿ ಬುಮ್ರಾಗೆ ಮುಂದಿನ ಇಂಗ್ಲೆಂಡ್ ವಿರುದ್ದದ ಟೆಸ್ಟ್ ಸರಣಿ ವೇಳೆ ವಿಶ್ರಾಂತಿ ನೀಡಬೇಕೆಂದು ಗಂಭೀರ್ ಆಗ್ರಹಿಸಿದ್ದಾರೆ.
ಚೆನ್ನೈನಲ್ಲಿ ಫೆಬ್ರವರಿ 5 ರಿಂದ ಆರಂಭವಾಗಲಿರುವ ಇಂಗ್ಲೆಂಡ್ ವಿರುದ್ಧ ಎಲ್ಲಾ ಮಾದರಿಯ ಪಂದ್ಯಗಳಲ್ಲಿ ಬುಮ್ರಾರನ್ನು ಆಡಿಸುವುದು ನ್ಯಾಯಸಮ್ಮತವಲ್ಲ ಎಂದು ಗಂಭೀರ್ ಭಾವಿಸಿದ್ದಾರೆ.
ಪಂದ್ಯವೊಂದರಲ್ಲಿ ವಿಕೆಟ್ ಪಡೆದ ಬುಮ್ರಾಗೆ ಅಭಿನಂದನೆ "ದೀರ್ಘಾವಧಿಗೆ ಬುಮ್ರಾ ಭಾರತದ ಬೌಲಿಂಗ್ ದಾಳಿಯ ನಾಯಕರಾಗಲಿದ್ದಾರೆ. ಹಾಗಾಗಿ ಅವರು ಫಿಟ್ ಆಗಿರುವುದು ತುಂಬಾ ಮಹತ್ವದ್ದಾಗಿದೆ. ಆದ್ದರಿಂದ ನೀವು ಆತನನ್ನು ಜೋಪಾನವಾಗಿ ನೋಡಿಕೊಳ್ಳಬೇಕು" ವಿಶ್ವಕಪ್ ವಿಜೇತ ಎಡಗೈ ಬ್ಯಾಟ್ಸ್ಮನ್ ಹೇಳಿದ್ದಾರೆ.
ಇಂಗ್ಲೆಂಡ್ ವಿರುದ್ಧದ 4 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಬುಮ್ರಾ ಅವರನ್ನು ಆಡಿಸಬಾರದು. ಮೊಹಮ್ಮದ್ ಶಮಿ, ಇಶಾಂತ್ ಶರ್ಮಾ ಉಮೇಶ್ ಯಾದವ್ ಅನ್ಫಿಟ್ ಆಗಿದ್ದಾರೆ ಎಂದು ನನಗೆ ಗೊತ್ತಿದೆ. ಆದ್ರೂ ನೀವು ಜಸ್ಪ್ರೀತ್ ಬುಮ್ರಾರನ್ನು ಎಲ್ಲಾ 4 ಟೆಸ್ಟ್ ಪಂದ್ಯಗಳಲ್ಲಿ ಆಡಸಬಾರದು, ಅದು ಅವರಿಗೆ ಅನ್ಯಾಯ ಮಾಡಿದಂತಾಗುತ್ತದೆ ಎಂದು ಅವರು ಹೇಳಿದ್ದಾರೆ.
ಅದಾಗ್ಯೂ, ಜಸ್ಪ್ರೀತ್ ಬುಮ್ರಾ ಭಾರತದಲ್ಲಿ ಇನ್ನೂ ಒಂದು ಟೆಸ್ಟ್ ಪಂದ್ಯ ಆಡಿಲ್ಲ. ಹಾಗಾಗಿ ಇಂಡಿಯನ್ ಟೀಮ್ ಮ್ಯಾನೇಜ್ಮೆಂಟ್ ಬುಮ್ರಾರನ್ನು ಉತ್ತಮ ರೀತಿಯಲ್ಲಿ ನಡೆಸಿಕೊಳ್ಳಲಿದೆ ಎಂದು ನನಗೆ ಖಾತ್ರಿಯಿದೆ. ಬುಮ್ರಾರನ್ನು ಇಂಗ್ಲೆಂಡ್, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ಮತ್ತು ನ್ಯೂಜಿಲ್ಯಾಂಡ್ನಂತಹ ಪಿಚ್ಗಳಲ್ಲಿ ಬಳಸಿಕೊಳ್ಳಬೇಕು. ಅಲ್ಲಿ ಅವರ ಬೌಲಿಂಗ್ ಭಯಾನಕವಾಗಿರುತ್ತದೆ ಎಂದು ಗಂಭೀರ್ ತಿಳಿಸಿದ್ದಾರೆ.
ಇದನ್ನೂ ಓದಿ: ಗಾಯಗೊಂಡ ಸಿಂಹಗಳು vs ಸೋಲಿಲ್ಲದ ಸರದಾರರು: ಹೊಸ ದಶಕದ ಚೊಚ್ಚಲ ಸರಣಿ ಗೆಲ್ಲೋರು ಯಾರು ?