ಲಾಹೋರ್:ಪಾಕಿಸ್ತಾನ ತಂಡವನ್ನು ಅದರ ನೆಲದಲ್ಲೇ 3-0ಯಲ್ಲಿ ಟಿ20 ಸರಣಿಯನ್ನು ಕ್ಲೀನ್ಸ್ವೀಪ್ ಮಾಡುವ ಮೂಲಕ ಟಿ20 ಕ್ರಿಕೆಟ್ ಇತಿಹಾಸದಲ್ಲಿ ಶ್ರೀಲಂಕಾ ತಂಡ ದಾಖಲೆ ಬರೆದಿದೆ.
ಮಲಿಂಗಾ, ಪೆರೆರಾ, ಕುಸಾಲ್ ಮೆಂಡಿಸ್ ಸೇರಿದಂತೆ ತಂಡದ ಪ್ರಮುಖ ಆಟಗಾರರ ಅನುಪಸ್ಥಿತಿಯಲ್ಲಿ ಪಾಕ್ ಪ್ರವಾಸ ಕೈಗೊಂಡಿದ್ದ ಶ್ರೀಲಂಕಾ ತಂಡ ಏಕದಿನ ಸರಣಿಯಲ್ಲಿ ಸೋಲನುಭವಿಸಿದರೂ ಟಿ20 ಯಲ್ಲಿ ಮೊದಲ ಶ್ರೇಯಾಂಕದ ಪಾಕಿಸ್ತಾನಕ್ಕೆ 3-0ಯಲ್ಲಿ ಸೋಲುಣಿಸು ಮೂಲಕ ಪಾಕ್ ನೆಲದಲ್ಲಿ ಸರಣಿ ಗೆದ್ದ ಮೊದಲ ತಂಡ ಎನಿಸಿಕೊಂಡಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಶ್ರೀಲಂಕಾ ಪ್ರಮುಖ ಬ್ಯಾಟ್ಸ್ಮನ್ಗಳ ವೈಫಲ್ಯದ ಹೊರತಾಗಿಯೂ 20 ಓವರ್ಗಳಲ್ಲಿ 147 ರನ್ಗಳಿಸಿತ್ತು. ಏಕಾಂಗಿಯಾಗಿ ಪಾಕಿಸ್ತಾನ ಬೌಲರ್ಗಳನ್ನು ಎದುರಿಸಿದ ಒಸಾಡ ಫರ್ನಾಂಡೊ 48 ಎಸೆತಗಳಲ್ಲಿ 3 ಸಿಕ್ಸರ್ ಹಾಗೂ 8 ಬೌಂಡರಿ ಸಹಿತ 78 ರನ್ಗಳಿಸಿದರು.
ಪಾಕ್ ಪರ ಅಮೀರ್ 3 ಹಾಗೂ ಇಮಾದ್ ವಾಸಿಂ ಮತ್ತು ವಹಾಬ್ ರಿಯಾಜ್ ತಲಾ ಒಂದು ವಿಕೆಟ್ ಪಡೆದಿದ್ದರು.148 ರನ್ಗಳ ಗುರಿ ಬೆನ್ನತ್ತಿದ ಪಾಕ್ ತಂಡ ಖಾತೆ ತೆರೆಯುವ ಮೊದಲೆ ಫಾಖರ್ ಝಮಾನ್ ವಿಕೆಟ್ ಕಳೆದುಕೊಂಡಿತು. ಆದರೆ, ಬಾಬರ್ ಅಜಂ(27) ಹ್ಯಾರೀಸ್ ಸೊಹೈಲ್ ಜೊತೆಗೂಡಿ 76 ರನ್ಗಳ ಜೊತೆಯಾಟ ನೀಡಿದರು . ಬಾಬರ್ ಔಟಾಗುತ್ತಿದ್ದಂತೆ ಉಳಿದ ಬ್ಯಾಟ್ಸ್ಮನ್ಗಳು ಪೆವಿಲಿಯನ್ ಫರೇಡ್ ನಡೆಸಿದರು.
ಸರ್ಫರಾಜ್ 17, ವಾಸಿಂ 3, ಆಸಿಫ್ ಅಲಿ 1 ರನ್ಗಳಿಸಿ ವಿಕೆಟ್ ಒಪ್ಪಿಸಿದರು. ಹ್ಯಾರೀಸ್ ಸೊಹೈಲ್ ಮಾತ್ರ 50 ಎಸೆತಗಳಲ್ಲಿ 52 ರನ್ಗಳಿಸಿ ತಂಡದ ಗೆಲುವಿಗೆ ಹೋರಾಡಿದರಾದರೂ ನಿರ್ಣಾಯಕ ಹಂತದಲ್ಲಿ ವಿಕೆಟ್ ಒಪ್ಪಿಸಿದರಿಂದ ಪಾಕ್ ತಂಡ ಸೋಲು ಕಾಣಬೇಕಾಯಿತು. ಅತ್ಯುತ್ತಮ ಬೌಲಿಂಗ್ ದಾಳಿ ನಡೆಸಿದ ಲಂಕಾ ಪರ ವಾನಿಂಡು ಹಸರಂಗ 3. ಲಹಿರು ಕುಮಾರ 2 ಹಾಗೂ ರಜಿತಾ ಒಂದು ವಿಕೆಟ್ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿತು.