ನವದೆಹಲಿ: ಮಾರ್ಚ್ 29 ರಂದು ಟೀಂ ಇಂಡಿಯಾದ ಮಾಜಿ ಸ್ಪೋಟಕ ಬ್ಯಾಟ್ಸ್ಮನ್ ವಿರೇಂದ್ರ ಸೆಹ್ವಾಗ್ ಅವರಿಗೆ ವಿಶೇಷ ದಿನ. ಈ ದಿನವಂತೂ ವೀರು ಅಭಿಮಾನಿಗಳು ಮರೆಯಲು ಸಾಧ್ಯವಿಲ್ಲ. ಏಕೆಂದರೆ ವಿರೇಂದ್ರ ಸೆಹ್ವಾಗ್ ಟೆಸ್ಟ್ ಕ್ರಿಕೆಟ್ನ್ನು ಏಕದಿನ ಮಾದರಿಯಲ್ಲಿ ಆಡಿ ತ್ರಿಶತಕ ಸಿಡಿಸಿದ ದಿನವದು.
ಹೌದು, ಟೀಂ ಇಂಡಿಯಾ ಪರ ಟೆಸ್ಟ್ನಲ್ಲಿ ಮೊದಲ ತ್ರಿಶತಕ ಬಂದಿದ್ದು ಸೆಹ್ವಾಗ್ ಅವರ ಬ್ಯಾಟ್ನಿಂದಲೇ. ಅಲ್ಲಿಯವರೆಗೆ ಡಬಲ್ ಸೆಂಚುರಿ ಸಾಧನೆಯಲ್ಲೇ ಕಳೆದು ಹೋಗುತ್ತಿದ್ದ ಭಾರತದ ಬ್ಯಾಟ್ಸ್ಮನ್ಗಳ ಮಧ್ಯೆ ಮೊದಲ ಬಾರಿ ಟ್ರಿಪಲ್ ಸೆಂಚುರಿ ಸಿಡಿಸಿ ಸೆಹ್ವಾಗ್ ದಾಖಲೆಯ ಪುಟ ಸೇರಿದ್ದರು. 2004 ರಲ್ಲಿ ಭಾರತೀಯ ಕ್ರಿಕೆಟ್ ಇತಿಹಾಸದಲ್ಲೇ ಮೊದಲ ಬಾರಿ ಸೆಹ್ವಾಗ್ ತ್ರಿಶತಕ ಸಿಡಿಸಿದ್ದರು. ಅಚ್ಚರಿಯ ವಿಷಯ ಎಂದರೆ ಈ ಸಾಧನೆ ಮಾಡಿದ ಇದೇ ದಿನಾಂಕದಂದೇ ಮತ್ತೊಮ್ಮೆ ವೀರು ತ್ರಿಶತಕ ಬಾರಿಸಿ ತಮ್ಮ ದಾಖಲೆಯನ್ನ ತಾವೇ ಮುರಿದಿದ್ದರು.
ನಜಾಫ್ಗಢದ ನವಾಬ ಎಂದೇ ಖ್ಯಾತಿ ಪಡೆದಿದ್ದ ವಿರೇಂದ್ರ ಸೆಹ್ವಾಗ್ 2004, ಮಾರ್ಚ್ 29 ರಂದು ಪಾಕಿಸ್ತಾನ ವಿರುದ್ಧ ಪಾಕ್ನಲ್ಲಿ ಅಕ್ಷರಶಃ ಅಬ್ಬರಿಸಿ ಬೊಬ್ಬಿರಿದಿದ್ದರು. ಪಾಕಿಸ್ತಾನದ ವಿರುದ್ಧದ ಮೂರು ಟೆಸ್ಟ್ ಪಂದ್ಯಗಳ ಸರಣಿಯ ಮೊದಲ ಟೆಸ್ಟ್ನಲ್ಲಿ ಟಾಸ್ ಗೆದ್ದ ಭಾರತ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತ್ತು. ಆಕಾಶ್ ಚೋಪ್ರಾ ಅವರೊಂದಿಗೆ ಇನಿಂಗ್ಸ್ ಆರಂಭಿಸಿದ್ದ ಸೆಹ್ವಾಗ್, ಏಕದಿನ, ಟಿ-20 ಮಾದರಿಯಲ್ಲಿ ಬ್ಯಾಟಿಂಗ್ ಆರಂಭಿಸಿದರು.
ಒಂದೆಡೆ ಆಕಾಶ್ ಚೋಪ್ರಾ (42 ರನ್) ಮತ್ತು ರಾಹುಲ್ ದ್ರಾವಿಡ್ ( 6 ) ರನ್ಗಳಿಸಿ ಬೇಗನೆ ಔಟಾಗಿ ತಂಡ ಸಂಕಷ್ಟದಲ್ಲಿತ್ತು. ಇತ್ತ ಸೆಹ್ವಾಗ್ ಮಾತ್ರ ಬಿರುಸಿನ ಆಟವನ್ನೇ ಮುಂದುವೆರೆಸಿದ್ದರು. ಮೊದಲ ದಿನದಾಟದ ಅಂತ್ಯದಲ್ಲಿ ಸೆಹ್ವಾಗ್ ಅಜೇಯ 228 ರನ್ ಸಿಡಿಸಿದ್ದರು. ಮರುದಿನ ಸಕ್ಲೇನ್ ಮುಷ್ತಾಕ್ ಎಸೆತದಲ್ಲಿ ಸಿಕ್ಸರ್ ಸಿಡಿಸಿ ಸೆಹ್ವಾಗ್ 300 ರನ್ ಪೂರೈಸಿದರು. ಕೇವಲ 364 ಎಸೆತಗಳನ್ನು ಎದುರಿಸಿದ ವೀರು ಭಾರತದ ಪರ ಮೊದಲ ತ್ರಿಶತಕ ಸಿಡಿಸಿದ ಆಟಗಾರ ಎಂಬ ಹೇಗ್ಗಳಿಕೆಗೆ ಪಾತ್ರರಾಗಿದ್ದರು. 375 ಎಸೆತಗಳಲ್ಲಿ ಒಟ್ಟು 309 ರನ್ ಗಳಿಸಿದ ವೀರು ಕೊನೆಗೂ ವಿಕೆಟ್ ಒಪ್ಪಿಸಿದರು. ಈ ವೇಳೆ, ತಮ್ಮ ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ 39 ಬೌಂಡರಿ ಮತ್ತು 6 ಸಿಕ್ಸರ್ಗಳು ಹರಿದು ಬಂದಿದ್ದವು. ಈ ಪಂದ್ಯವನ್ನು ಟೀಂ ಇಂಡಿಯಾ 52 ರನ್ಗಳಿಂದ ಗೆದ್ದುಕೊಂಡಿತ್ತು.