ಕರ್ನಾಟಕ

karnataka

ETV Bharat / sports

ಮಹಿಳಾ ಕ್ರಿಕೆಟ್​ಗೂ ಮನ್ನಣೆ ಸಿಗುವಂತೆ ಮಾಡಿದ ಹರ್ಮನ್​ ಪ್ರೀತ್​ ಕೌರ್​ ಸ್ಫೋಟಕ ಇನ್ನಿಂಗ್ಸ್​ಗೆ 3 ವರ್ಷ - ಹರ್ಮನ್​ ಪ್ರೀತ್​ ಕೌರ್​ ವಿಶ್ವಕಪ್​ ಶತಕ

ಹರ್ಮನ್ ಪ್ರೀತ್​ ಕೌರ್​ ಅವರು 2017ರ ವಿಶ್ವಕಪ್​ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸಿಡಿಸಿದ್ದ 171 ರನ್​ ಭಾರತದಲ್ಲಿ ಲಕ್ಷಾಂತರ ಅಭಿಮಾನಿಗಳು ಮಹಿಳಾ ಕ್ರಿಕೆಟ್​ ಪರ ನಿಲ್ಲಲು ನೆರವಾಯಿತು ಎಂದರೆ ತಪ್ಪಾಗಲಾರದು. ಅದು ಆಸ್ಟ್ರೇಲಿಯಾದಂತಹ ಬಲಿಷ್ಠ ತಂಡ ವಿರುದ್ಧ ಹರ್ಮನ್​ ಪ್ರೀತ್​ ಕೌರ್​ ಸಿಡಿಸಿದ್ದ ಆ ಸ್ಫೋಟಕ ಶತಕಕ್ಕೆ ಈಗ 3 ವರ್ಷಗಳ ಸಂಭ್ರಮ.

ಹರ್ಮನ್​ ಪ್ರೀತ್​ ಕೌರ್ 171
ಹರ್ಮನ್​ ಪ್ರೀತ್​ ಕೌರ್ 171

By

Published : Jul 20, 2020, 4:30 PM IST

ಮುಂಬೈ:ಭಾರತದಲ್ಲಿ ಮಹಿಳಾ ಕ್ರಿಕೆಟ್​ನ ಯಶಸ್ಸಿನ ಹಿಂದೆ ಮಿಥಾಲಿ ರಾಜ್​, ಅಂಜುಮ್ ಚೋಪ್ರಾ, ಜೂಲಾ ಗೋಸ್ವಾಮಿ ಅಂತಹ ಬಹಳಷ್ಟು ಮಹಿಳಾ ಕ್ರಿಕೆಟಿಗರ​ ಸಾಕಷ್ಟು ಪರಿಶ್ರಮವಿದೆ. ಆದರೆ ಇಂದು ಪುರುಷರ ಕ್ರಿಕೆಟ್ ಪಂದ್ಯಗಳಂತೆ ಮಹಿಳಾ ಕ್ರಿಕೆಟ್​ಗೆ ಪ್ರಾಮುಖ್ಯತೆ ನೀಡುವಂತೆ ಮಾಡಿದ್ದು ಪಂಜಾಬ್​ನ ಹರ್ಮನ್ ಪ್ರೀತ್​ ಕೌರ್ ಅವರ ಆ ಒಂದು ಇನ್ನಿಂಗ್ಸ್​​ ಎಂದರೇ ತಪ್ಪಾಗಲಾರದು.

ಹರ್ಮನ್ ಪ್ರೀತ್​ ಕೌರ್​ ಅವರು 2017ರ ವಿಶ್ವಕಪ್​ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸಿಡಿಸಿದ್ದ 171 ರನ್​ ಭಾರತದಲ್ಲಿ ಲಕ್ಷಾಂತರ ಅಭಿಮಾನಿಗಳು ಮಹಿಳಾ ಕ್ರಿಕೆಟ್​ ಪರ ನಿಲ್ಲಲು ನೆರವಾಯಿತು ಎಂದರೆ ತಪ್ಪಾಗಲಾರದು. ಅದು ಆಸ್ಟ್ರೇಲಿಯಾದಂತಹ ಬಲಿಷ್ಠ ತಂಡದ ವಿರುದ್ಧ ಹರ್ಮನ್​ ಪ್ರೀತ್​ ಕೌರ್​ ಸಿಡಿಸಿದ್ದ ಆ ಸ್ಫೋಟಕ ಶತಕಕ್ಕೆ 3 ವರ್ಷಗಳ ಸಂಭ್ರಮವಾಗಿದೆ.

ಹರ್ಮನ್​ ಪ್ರೀತ್​ ಕೌರ್

ಸೆಮಿಫೈನಲ್​ ಪಂದ್ಯಕ್ಕೂ ಮುನ್ನ ಭಾರತ ತಂಡವನ್ನು ಆಸ್ಟ್ರೇಲಿಯಾ ಲೀಗ್​ನಲ್ಲಿ ಮಣಿಸಿತ್ತು. ಇದು ಟೂರ್ನಿಯಲ್ಲಿ ಎರಡನೇ ಬಾರಿ ಮುಖಾಮುಖಿಯಾಗಿದ್ದರಿಂದ ನಂಬರ್​ ಒನ್​ ತಂಡವನ್ನು ಸೋಲಿಸುವುದು ಆಸಾಧ್ಯ ಎಂದೇ ಭಾವಿಸಲಾಗಿತ್ತು. ಆದರೆ ಹರ್ಮನ್​ ಪ್ರೀತ್​ ಕೌರ್​ ಎಂಬ ಯುವ ಆಟಗಾರ್ತಿಯ ಸ್ಫೋಟಕ ಬ್ಯಾಟಿಂಗ್​ ಶೈಲಿ ವಿಶ್ವ ಕ್ರಿಕೆಟ್​ಅನ್ನೇ ಬೆಕ್ಕಸ ಬೆರಗಾಗುವಂತೆ ಮಾಡಿತ್ತು. ಅಲ್ಲದೆ ಆ ಪಂದ್ಯ ಭಾರತದ ಮಹಿಳಾ ಕ್ರಿಕೆಟ್ ಅನ್ನು​ ಇತಿಹಾಸ ಪುಟ ಸೇರುವಂತೆ ಮಾಡಿತ್ತು.

ಮಳೆಯ ಕಾರಣ 42 ಓವರ್​ಗಳಿಗೆ ಸೀಮಿತಗೊಳಿಸಿದ್ದ ಆ ಪಂದ್ಯದಲ್ಲಿ ನಾಯಕಿ ಮಿಥಾಲಿ ರಾಜ್​ 25 ನೇ ಓವರ್​ನಲ್ಲಿ ತಂಡದ ಮೊತ್ತ 101ರನ್ ಆಗಿದ್ದ ವೇಳೆ ಔಟಾದರು. ಅಲ್ಲಿಯವರೆಗೆ ಮಿಥಾಲಿರಾಜ್​ ನಂಬಿಕೊಂಡಿದ್ದ ತಂಡದಲ್ಲಿ ಸೋಲಿನ ಛಾಯೆ ಮೂಡಿತ್ತು. ಆದರೆ ಯುವ ಆಲ್​ರೌಂಡರ್​ ದೀಪ್ತಿ ಶರ್ಮಾರನ್ನು ಜೊತೆಗೂಡಿದ ಪಂಜಾಬ್​ನ ಹರ್ಮನ್​ ಪಂದ್ಯದ ಗತಿಯನ್ನೇ ಬದಲಾಯಿಸಿದ್ದರು. ಅದಾಗಲೇ ಬಿಗ್​ಬ್ಯಾಶ್​ ಲೀಗ್​ನಲ್ಲಿ ಆಸ್ಟ್ರೇಲಿಯಾ ತಂಡದ ಬೌಲಿಂಗ್ ಎದುರಿಸಿದ್ದ ಅವರು ಏಕಾಂಗಿಯಾಗಿ ಆಸೀಸ್​ ಬೌಲರ್​ಗಳ ಸವಾಲಿಗೆ​ ತಮ್ಮ ಅಗ್ರೆಸಿವ್​ ಬ್ಯಾಟಿಂಗ್ ಮೂಲಕ ಉತ್ತರಿಸಿದ್ದರು.

ಹರ್ಮನ್​ ಪ್ರೀತ್​ ಕೌರ್

ಆರಂಭದಲ್ಲಿ 60 ಎಸೆತಗಳಿಗೆ 40 ರನ್ ​ಗಳಿಸಿ ನಿಧಾನಗತಿ ಬ್ಯಾಟಿಂಗ್ ನಡೆಸಿದ್ದ ಕೌರ್​ ನಂತರ ಸ್ಟಂಪ್​ ಔಟ್​ ನಿಂದಲೂ ಬಚಾವ್​ ಆಗಿದ್ದರು. ಬಳಿಕ ಸಿಕ್ಕ ಅವಕಾಶವನ್ನು ಬಳಸಿಕೊಂಡ ಕೌರ್​ ಕೇವಲ 4 ಎಸೆತಗಳಲ್ಲಿ ಅರ್ಧಶತಕ ಪೂರ್ಣಗೊಳಿಸಿದರು. ಈ ಹಂತದಲ್ಲಿ ದೀಪ್ತಿ ಶರ್ಮಾರ ಗೊಂದಲದಿಂದ ಮತ್ತೊಮ್ಮೆ ಔಟ್ ಆಗುವ ​ಸಂಭವ ಕೂಡ ನಿರ್ಮಾಣವಾಗಿತ್ತು. ಆದ್ರೆ ಸ್ವಲ್ಪದರಲ್ಲೇ ಬಚಾವ್​ ಆದ ಅವರು ಮೈದಾನದಲ್ಲೇ ದೀಪ್ತಿ ಮೇಲೆ ಸಿಟ್ಟಾಗಿ ಬೈಯ್ದ ಘಟನೆಯೂ ನಡೆದಿತ್ತು.

ಆದರೂ ಆಟದ ಕಡೆ ಮತ್ತೆ ಗಮನ ಹರಿಸಿದ ಕೌರ್​ 82 ಎಸೆತಗಳಲ್ಲಿ ಶತಕ ಪೂರ್ಣಗೊಳಿಸಿದರು. ಅಲ್ಲಿಯವರೆಗೆ ಅವರ ಸ್ಟ್ರೈಕ್​ ರೇಟ್​ 111.11 ಇತ್ತು. ಕೌರ್​ 100 ರಿಂದ 150 ತಲುಪಲು ತೆಗೆದುಕೊಂಡಿದ್ದು ಕೇವಲ 17 ಎಸೆತ. ಅಲ್ಲದೆ ನಂತರದ 8 ಎಸೆತಗಳಲ್ಲಿ 21 ರನ್​ ಸಿಡಿಸಿದ್ದರು. ಒಟ್ಟಾರೆ 115 ಎಸೆತಗಳಲ್ಲಿ ಭರ್ಜರಿ 7 ಸಿಕ್ಸರ್​ ಹಾಗೂ 20 ಬೌಂಡರಿ ಸಹಿತ 171 ರನ್​ ಸಿಡಿಸಿದ್ದರು.

ಈ ಪಂದ್ಯದಲ್ಲಿ ಭಾರತ 42 ಓವರ್​ಗಳಲ್ಲಿ 281 ರನ್ ​ಗಳಿಸಿದರೆ, ಆಸ್ಟ್ರೇಲಿಯಾ 245 ರನ್​ ಗಳಿಸಲಷ್ಟೇ ಶಕ್ತವಾಗಿ 36 ರನ್​ಗಳ ಸೋಲು ಕಂಡಿತು. ಆದರೆ ಫೈನಲ್​ನಲ್ಲಿ ಇಂಗ್ಲೆಂಡ್​ ವಿರುದ್ಧ 9 ರನ್​ಗಳ ಸೋಲು ಕಾಣುವ ಮೂಲಕ ಭಾರತ ನಿರಾಶೆ ಅನುಭವಿಸಿತು.

ABOUT THE AUTHOR

...view details