ಕೊಲಂಬೊ: ಮೊದಲ ಟೆಸ್ಟ್ನಲ್ಲಿ ಸೋಲನುಭವಿಸಿದ್ದ ನ್ಯೂಜಿಲ್ಯಾಂಡ್ ತಂಡ ಎರಡನೇ ಟೆಸ್ಟ್ನಲ್ಲಿ ಆತಿಥೇಯ ಶ್ರೀಲಂಕಾ ತಂಡವನ್ನ ಇನ್ನಿಂಗ್ಸ್ ಹಾಗೂ 65 ರನ್ಗಳಿಂದ ಮಣಿಸಿ ಸರಣಿಯಲ್ಲಿ 1-1ರಿಂದ ಸಮಬಲ ಸಾಧಿಸಿದೆ.
ಎರಡನೇ ಪಂದ್ಯದಲ್ಲಿ ಮೊದಲೆರಡು ದಿನ ಬಹುತೇಕ ಮಳೆಗೆ ಆಹುತಿಯಾಗಿತ್ತು. ಆದರೂ ಕೊನೆಯ ದಿನ ಅದ್ಭುತ ಬೌಲಿಂಗ್ ದಾಳಿ ನಡೆಸಿದ ಕಿವೀಸ್ ಪಡೆ ಲಂಕಾ ತಂಡವನ್ನು 122 ರನ್ಗಳಿಗೆ ಆಲೌಟ್ ಮಾಡಿ ಇನ್ನಿಂಗ್ಸ್ ಹಾಗೂ 65 ರನ್ಗಳಿಂದ ಮಣಿಸಿ ಸರಣಿ ಸಮಬಲಪಡಿಸಿಕೊಂಡಿತು.
ಮೊದಲು ಬ್ಯಾಟಿಂಗ್ ನಡೆಸಿದ್ದ ಶ್ರೀಲಂಕಾ ಮೊದಲ ಇನ್ನಿಂಗ್ಸ್ನಲ್ಲಿ 244 ರನ್ಗಳಿಗೆ ಆಲೌಟ್ ಆಗಿತ್ತು. ಇದಕ್ಕುತ್ತರವಾಗಿ ನ್ಯೂಜಿಲ್ಯಾಂಡ್ ಟಾಮ್ ಲ್ಯಾಥಮ್ (154) ವ್ಯಾಟ್ಲಿಂಗ್ (105) ಶತಕ ಹಾಗೂ ಗ್ರ್ಯಾಂಡ್ಹೋಮ್(83)ರ ಅರ್ಧಶತಕದ ನೆರವಿನಿಂದ 431 ರನ್ಗಳಿಸಿ ಡಿಕ್ಲೇರ್ ಮಾಡಿಕೊಂಡಿತ್ತು.
187 ರನ್ಗಳ ಹಿನ್ನಡೆ ಅನುಭವಿಸಿದ್ದ ಲಂಕಾ ಎರಡನೇ ಇನ್ನಿಂಗ್ಸ್ನಲ್ಲಿ ಕೊನೆಯ ದಿನ 85 ಓವರ್ಗಳನ್ನ ಆಡಬೇಕಿತ್ತು. ಆದರೆ, ಕರಾರುವಾಕ್ ಬೌಲಿಂಗ್ ದಾಳಿ ನಡೆಸಿದ ಕಿವೀಸ್ ಬೌಲರ್ಗಳು 70.2 ಓವರ್ಗಳಲ್ಲಿ 122 ರನ್ಗಳಿಗೆ ಆಲೌಟ್ ಮಾಡಿದರು. ಬೌಲ್ಟ್,ಸೌಥಿ,ಅಜಾಜ್ ಪಟೇಲ್,ವಿಲಿಯಮ್ ಸಮರ್ವಿಲ್ಲೆ ತಲಾ ಎರಡು ವಿಕೆಟ್ ಪಡೆದರೆ, ಗ್ರ್ಯಾಂಡ್ ಹೋಮ್ ಒಂದು ವಿಕೆಟ್ ಪಡೆದರು.
ಲಂಕಾ ಪರ 51 ರನ್ಗಳಿಸಿದ ಡಿಕ್ವೆಲ್ಲಾ ಸೋಲು ತಪ್ಪಿಸಲು 161 ಎಸೆತ ಎದುರಿಸಿ ಕಠಿಣ ಪ್ರಯತ್ನ ನಡೆಸಿದರಾದರು ಜೊತೆಗಾರರಿಲ್ಲದ ಕಾರಣ ಸೋಲು ಕಾಣಬೇಕಾಯಿತು. ಆಕರ್ಷಕ ಶತಕ ಶತಕಗಳಿಸಿದ ಲ್ಯಾಥಮ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರೆ, ಲ್ಯಾಥಮ್ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.