ಮುಂಬೈ:ಭಾರತ ತಂಡದ ಶ್ರೇಷ್ಠ ನಾಯಕ ಎಂ ಎಸ್ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಕಾಲಿಟ್ಟು ಇಂದಿಗೆ 15 ವರ್ಷಗಳು ತುಂಬಿವೆ.
ಡಿಸೆಂಬರ್ 23, 2004ರಂದು ಎಂ ಎಸ್ ಧೋನಿ ಬಾಂಗ್ಲಾದೇಶದ ವಿರುದ್ಧದ ಪಂದ್ಯದ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ್ದರು. ಅದೇ ಪಂದ್ಯದಲ್ಲಿ ಡಕ್ ಔಟ್ ಆಗುವ ಮೂಲಕ ನಿರಾಶೆಯನ್ನು ಅನುಭವಿಸಿದ್ದರು. ಆದ್ರೆ ಕ್ರಿಕೆಟ್ ಶುರು ಮಾಡಿದಾಗ ಅನುಭವ ಕೆಟ್ಟದಾಗಿದ್ದರೂ, ಆನಂತರ ಕೇವಲ 42 ಇನ್ನಿಂಗ್ಸ್ನಲ್ಲಿ ಐಸಿಸಿ ಏಕದಿನ ರ‍್ಯಾಂಕಿಂಗ್ ಪಟ್ಟಿಯಲ್ಲಿ ನಂಬರ್ 1 ಸ್ಥಾನಕ್ಕೇರಿದ್ದರು. ಈ ದಾಖಲೆಯನ್ನು 13 ವರ್ಷಗಳಾದರೂ ಯಾವ ಆಟಗಾರನಿಂದಲೂ ಮುರಿಯಲು ಸಾಧ್ಯವಾಗಿಲ್ಲ.
2007 ಚೊಚ್ಚಲ ಟಿ20 ವಿಶ್ವಕಪ್ನಲ್ಲಿ ಭಾರತ ತಂಡದ ನಾಯಕತ್ವ ವಹಿಸಿಕೊಂಡ ಧೋನಿ ತಮ್ಮ ಆಕ್ರಮಣ ಆಟಕ್ಕೆ ಬ್ರೇಕ್ ನೀಡಿ ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ ನಡೆಸಲು ಶುರು ಮಾಡಿದರು. ಸೆಹ್ವಾಗ್, ಯುವರಾಜ್, ಗಂಭೀರ್, ಹರ್ಭಜನ್ ಸಿಂಗ್ ಅಂತಹ ಮಹಾನ್ ಆಟಗಾರರನ್ನು ಒಳಗೊಂಡು ತಂಡವನ್ನು ಮುನ್ನಡೆಸಿ ಭಾರತಕ್ಕೆ ಚೊಚ್ಚಲ ಟಿ20 ವಿಶ್ವಕಪ್ ತಂದುಕೊಟ್ಟರಲ್ಲದೆ 2007 ವಿಶ್ವಕಪ್ನಲ್ಲಿ ಲೀಗ್ನಲ್ಲೇ ಹೊರಬಿದ್ದು, ಅಭಿಮಾನಿಗಳ ಆಕ್ರೋಶಕ್ಕೆ ತುತ್ತಾಗಿದ್ದ ಭಾರತ ಕ್ರಿಕೆಟ್ ತಂಡವನ್ನು ಮತ್ತೆ ತಲೆ ಎತ್ತುವಂತೆ ಮಾಡಿದರು.
ಟಿ20 ವಿಶ್ವಕಪ್ ಗೆಲ್ಲುತ್ತಿದ್ದಂತೆ ಏಕದಿನ ತಂಡವನ್ನು ಮುನ್ನಡೆಸಿದ ಧೋನಿ 28 ವರ್ಷಗಳ ಬಳಿಕ ಭಾರತಕ್ಕೆ ಏಕದಿನ ವಿಶ್ವಕಪ್(2011) ಗೆಲ್ಲಿಸಿಕೊಟ್ಟರು. ನಂತರ 29 ವರ್ಷಗಳ ಐಸಿಸಿ ಚಾಂಪಿಯನ್ ಟ್ರೋಫಿ(2013ರಲ್ಲಿ) ಗೆಲ್ಲುವ ಮೂಲಕ ಐಸಿಸಿಯ ಎಲ್ಲಾ ಮೂರು ಟ್ರೋಫಿಗಳನ್ನು ಗೆದ್ದುಕೊಟ್ಟ ವಿಶ್ವದ ಏಕೈಕ ನಾಯಕ ಎಂಬ ಶ್ರೇಯಕ್ಕೆ ಪಾತ್ರರಾದರು. ಅಲ್ಲದೆ ಧೋನಿ ನಾಯಕತ್ವದಲ್ಲೇ ಭಾರತ ಮೊದಲ ಬಾರಿಗೆ ಟೆಸ್ಟ್ ರ್ಯಾಂಕಿಂಗ್ನಲ್ಲಿ ಮೊದಲ ಸ್ಥಾನಕ್ಕೇರಿತು.