ನವದೆಹಲಿ : ಅನಾನುಭವಿ ಭಾರತ ತಂಡವನ್ನು ಆಸೀಸ್ ನೆಲದಲ್ಲಿ ಯಶಸ್ವಿಯಾಗಿ ಮುನ್ನಡೆಸಿ ಭಾರತಕ್ಕೆ ಬಾರ್ಡರ್ ಗವಾಸ್ಕರ್ ಟ್ರೋಫಿ ತಂದು ಕೊಟ್ಟಿರುವ ರಹಾನೆ ಲಕ್ಷಾಂತರ ಅಭಿಮಾನಿಗಳ ಮನಸ್ಸು ಗೆದ್ದಿದ್ದಾರೆ. ಆದರೆ, ಕೊಹ್ಲಿ ಜೊತೆಗೆ ನಾಯಕತ್ವದ ವಿಷಯವಾಗಿ ಯಾವುದೇ ಮನಸ್ತಾಪವಿಲ್ಲ. ತಾವೂ ಅವಕಾಶ ಸಿಕ್ಕಾಗ ತಂಡವನ್ನು ನಾಯಕನಾಗಿ ಮುನ್ನಡೆಸುವುದಕ್ಕೆ ಖುಷಿಯಿದೆ ಎಂದು ರಹಾನೆ ಹೇಳಿದ್ದಾರೆ.
ಆಸೀಸ್ ನೆಲದಲ್ಲಿ ರಹಾನೆ ನೇತೃತ್ವದ ತಂಡ 2-1ರಲ್ಲಿ ಟೆಸ್ಟ್ ಸರಣಿ ಜಯಿಸಿದೆ. ಇದೀಗ ಫೆಬ್ರವರಿ 5ರಿಂದ ಚೆನ್ನೈನಲ್ಲಿ ಆರಂಭವಾಗಲಿರುವ ಟೆಸ್ಟ್ ಸರಣಿಯಲ್ಲಿ ಮತ್ತೆ ಕೊಹ್ಲಿ ಭಾರತ ತಂಡವನ್ನು ನಾಯಕನಾಗಿ ಮುನ್ನಡೆಸಲಿದ್ದಾರೆ.
ಇದೀಗ ರಹಾನೆ ಮತ್ತೆ ಉಪನಾಯಕನಾಗಿ ಕಾರ್ಯನಿರ್ವಹಿಸಲಿದ್ದು, ಈ ಕುರಿತು ತಮಗೆ ಯಾವುದೇ ಬೇಸರವಿಲ್ಲ. ಕೊಹ್ಲಿ ಯಾವಾಗಲೂ ನನ್ನ ನಾಯಕ, ನಾನು ಉಪನಾಯಕನಾಗಿರುತ್ತೇನೆ ಎಂದು ತಿಳಿಸಿದ್ದಾರೆ.
"ಯಾವುದೇ ಬದಲಾವಣೆಯಿಲ್ಲ. ವಿರಾಟ್ ಯಾವಾಗಲೂ ಭಾರತ ತಂಡದ ನಾಯಕ, ನಾನು ಉಪನಾಯಕ. ಅವರು ಯಾವಾಗ ಗೈರಾಗುತ್ತಾರೋ, ಆ ಸಂದರ್ಭದಲ್ಲಿ ತಂಡವನ್ನು ಮುನ್ನಡೆಸುವುದು ನನ್ನ ಕರ್ತವ್ಯ. ಜೊತೆಗೆ ಟೀಂ ಇಂಡಿಯಾ ಯಶಸ್ಸಿಗೆ ಶ್ರಮಿಸುವುದು ನನ್ನ ಜವಾಬ್ದಾರಿ" ಎಂದು ರಹಾನೆ ಪಿಟಿಐಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.