ನವದೆಹಲಿ: ಒಂದು ಕಾಲದಲ್ಲಿ ಭವಿಷ್ಯದ ಕೊಹ್ಲಿ ಎಂದೇ ಬಿಂಬಿತವಾಗಿದ್ದ ಭಾರತಕ್ಕೆ 2012 ರ ಅಂಡರ್ 19 ವಿಶ್ವಕಪ್ ಗೆಲ್ಲಿಸಿಕೊಟ್ಟಿದ್ದ ಉನ್ಮುಕ್ತ್ ಚಾಂದ್ ತಮ್ಮ ಗತಕಾಲದ ಬಗ್ಗೆ ಭಾರತ ತಂಡದ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ನಡೆಸಿದ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ.
ಚಾಂದ್ ತಮ್ಮ ಅಂಡರ್ 19 ವಿಶ್ವಕಪ್ ವಿಜಯದ ಬಗ್ಗೆ ಮಾತನಾಡುತ್ತಾ, ಖಂಡಿತವಾಗಿಯೂ ಯಾವುದೇ ಅಂಡರ್ 19 ಆಟಗಾರನಿಗೂ ವಿಶ್ವಕಪ್ ಅತಿ ಮುಖ್ಯವಾದ ವಿಷಯವಾಗಿರುತ್ತದೆ. ಕೆಲವು ವರ್ಷಗಳ ಕಠಿಣ ಪರಿಶ್ರಮ-ಜೂನಿಯರ್ ಕ್ರಿಕೆಟ್ ಆಡಿದವರಿಗೆ ಹಾಗೂ 16 ವರ್ಷದೊಳಗಿನವರಿಗೆ ಜೂನಿಯರ್ ವಿಶ್ವಕಪ್ ಅರ್ಹತೆ ಕೂಡ ಮಹತ್ವದ್ದಾಗಿರುತ್ತದೆ. ಎಲ್ಲಾ ಸೀನಿಯರ್ ಆಟಗಾರರಿಗೂ ವಿಶ್ವಕಪ್ ಗೆಲ್ಲುವ ಕನಸು ಹೇಗೋ, 19 ವರ್ಷದೊಳಗಿನವರಿಗೆ ಜೂನಿಯರ್ ವಿಶ್ವಕಪ್ ಎತ್ತಿ ಹಿಡಿಯುವುದು ಸಹ ದೊಡ್ಡ ಕನಸಾಗಿರುತ್ತದ ಎಂದಿದ್ದಾರೆ.
ನಾಲ್ಕು ವರ್ಷಗಳ ಹಿಂದೆಯಷ್ಟೇ ವಿರಾಟ್ ಬಯ್ಯಾ ತಂಡವನ್ನು ಮುನ್ನಡೆಸುವುದು ಮತ್ತು ವಿಶ್ವಕಪ್ ಗೆದ್ದಿದ್ದನ್ನು ನಾನು ನೋಡಿದ್ದೆ. ಅದು ನನ್ನ ಮೇಲೆ ದೊಡ್ಡ ಪ್ರಭಾವ ಬೀರಿತ್ತು. ಆದರೆ ನಮ್ಮಿಬ್ಬರ ಕಥೆಗಳು ವಿಭಿನ್ನವಾಗಿವೆ ಎಂದು ನನಗೆ ತಿಳಿದಿತ್ತು. ಎಲ್ಲರಂತೆ ನಾನು ಸ್ವಾಭಾವಿಕವಾಗಿ ಟೀಮ್ ಇಂಡಿಯಾ ಪರ ಆಡುವ ಬಯಕೆಗಿಂತ ಅಂಡರ್ 19 ವಿಶ್ವಕಪ್ ಗೆಲ್ಲುವುದರ ಕಡೆಗೆ ಹೆಚ್ಚು ಗಮನ ನೀಡಿದ್ದೆ ಎಂದು 2012 ಅಂಡರ್ 19 ವಿಶ್ವಕಪ್ ವಿಜೇತ ತಂಡದ ನಾಯಕ ಹೇಳಿದ್ದಾರೆ.