ಹೈದರಾಬಾದ್:ರೋಹಿತ್ 3ನೇ ಟೆಸ್ಟ್ ಪಂದ್ಯದಲ್ಲಿ ತಂಡಕ್ಕೆ ಸೇರ್ಪಡೆಗೊಂಡಿರುವುದರಿಂದ ಆಸ್ಟ್ರೇಲಿಯಾ ಬೌಲರ್ಗಳನ್ನು ಸಮರ್ಥವಾಗಿ ಎದುರಿಸುವ ಒಬ್ಬ ಬ್ಯಾಟ್ಸ್ಮನ್ ಸಿಕ್ಕಂತಾಗಿದೆ ಎಂದು ದೆಹಲಿ ತಂಡದ ರಣಜಿ ಕೋಚ್ ಹಾಗೂ ಕೊಹ್ಲಿ ಬಾಲ್ಯದ ಕೋಚ್ ಆಗಿರುವ ರಾಜ್ಕುಮಾರ್ ಶರ್ಮಾ ಹೇಳಿದ್ದಾರೆ.
"ರೋಹಿತ್ ಶರ್ಮಾ ಒಬ್ಬ ಅದ್ಭುತ ಬ್ಯಾಟ್ಸ್ಮನ್ ಆಗಿದ್ದು, ಅವರ ಸೇರ್ಪಡೆ ತಂಡದ ಬಲವನ್ನು ಬಲಿಷ್ಠಗೊಳಿಸಿದೆ. ತಂಡದಲ್ಲಿರುವವರಲ್ಲಿ ಅವರಿಗಿಂತ ಹುಕ್ ಮತ್ತು ಫುಲ್ ಶಾಟ್ ಹೊಡೆಯುವಂತ ಬ್ಯಾಟ್ಸ್ಮನ್ ಮತ್ತೊಬ್ಬನಿಲ್ಲ. ಹೊಸ ಚೆಂಡಿನಲ್ಲಿ ಆಸೀಸ್ ಬೌಲರ್ಗಳ ವಿರುದ್ಧ ಪ್ರತಿದಾಳಿ ನಡೆಸುವ ಸಾಮರ್ಥ್ಯ ರೋಹಿತ್ಗಿದೆ" ಎಂದು ರಾಜ್ಕುಮಾರ್ ಶರ್ಮಾ ಮಾಧ್ಯಮಕ್ಕೆ ತಿಳಿಸಿದ್ದಾರೆ.
ರೋಹಿತ್ ಶರ್ಮಾ ಸಿಡ್ನಿ ಕ್ರಿಕೆಟ್ ಗ್ರೌಂಡ್ನಲ್ಲಿ ನಡೆಯಲಿರುವ ಪಿಂಕ್ ಟೆಸ್ಟ್ನಲ್ಲಿ ಕನ್ನಡಿಗ ಮಯಾಂಕ್ ಅಗರ್ವಾಲ್ ಬದಲು ಕಣಕ್ಕಿಳಿಯಲಿದ್ದಾರೆ. ಅವರು ಯುವ ಬ್ಯಾಟ್ಸ್ಮನ್ ಶುಬ್ಮನ್ ಗಿಲ್ ಜೊತೆಯಲ್ಲಿ ಕಣಕ್ಕಿಳಿಯಲಿದ್ದಾರೆ.
ಇನ್ನು ಉಮೇಶ್ ಯಾದವ್ ಬದಲು ತಂಡದಲ್ಲಿ ಅವಕಾಶ ಪಡೆದಿರುವ ನವದೀಪ್ ಸೈನಿ ಬಗ್ಗೆಯೂ ಶರ್ಮಾ ಮೆಚ್ಚುಗೆಯ ಮಾತನಾಡಿದ್ದಾರೆ. "ನನ್ನ ಪ್ರಕಾರ ಸೈನಿ, ಶಾರ್ದುಲ್ ಮತ್ತು ನಟರಾಜನ್ಗಿಂತ ಅತ್ಯುತ್ತಮ ಬೌಲರ್ ಆಗಿದ್ದಾರೆ. ಏಕೆಂದರೆ ಸೈನಿ ಸತತವಾಗಿ 140ಕ್ಕಿಂತ ಹೆಚ್ಚಿನ ವೇಗದಲ್ಲಿ ಬೌಲಿಂಗ್ ಮಾಡಬಲ್ಲರು. ಅವರು ಸರಿಯಾದ ಪ್ರದೇಶದಲ್ಲಿ ಬೌಲಿಂಗ್ ಮಾಡುವುದರ ಜೊತೆಗೆ ದೀರ್ಘ ಸ್ಪೆಲ್ ಕೂಡ ಮಾಡಬಲ್ಲವರಾಗಿರುವುದರಿಂದ ತಂಡಕ್ಕೆ ದೊಡ್ಡ ಅನುಕೂಲವಾಗಲಿದೆ" ಎಂದಿದ್ದಾರೆ.
ಇದನ್ನು ಓದಿ:ವಾರ್ನರ್ ಆಡುವುದರಿಂದ ನಮ್ಮ ತಂಡ ಬಲಿಷ್ಠವಾಗಲಿದೆ, ಎದುರಾಳಿಗೆ ಒತ್ತಡ ಹೆಚ್ಚಾಗುತ್ತದೆ: ಟಿಮ್ ಪೇನ್