ಮುಂಬೈ: ಏಪ್ರಿಲ್ 2,2011 ಭಾರತದ ಇತಿಹಾಸದಲ್ಲಿ ಅಚ್ಚಳಿಯದೇ ಉಳಿದ ದಿನ. ಭಾರತೀಯ ಕ್ರಿಕೆಟಿಗರ ಪಾಲಿಗೆ ಅಂತೂ ಈ ದಿನ ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕಾದ ಸುದಿನ. ಬರೋಬ್ಬರಿ 28 ವರ್ಷಗಳ ಬಳಿಕ ಧೋನಿ ನಾಯಕತ್ವದಲ್ಲಿ ಟೀಂ ಇಂಡಿಯಾ ಎರಡನೇ ಬಾರಿಗೆ ವಿಶ್ವಕಪ್ಗೆ ಮುತ್ತಿಕ್ಕಿತ್ತು.
2011 ಏಪ್ರಿಲ್ 2 ರಂದು ಮುಂಬೈನ ವಾಂಖೇಡೆ ಕ್ರೀಡಾಂಗಣದಲ್ಲಿ ಈ ಐತಿಹಾಸಿಕ ಘಟನೆ ನಡೆದು ಇಂದಿಗೆ ಬರೋಬ್ಬರಿ 9 ವರ್ಷ. ಇಂದಿಗೂ ಕ್ರಿಕೆಟ್ ಅಭಿಮಾನಿಗಳ ಹೃದಯದಲ್ಲಿ ಶಾಶ್ವತವಾಗಿ ಪ್ರತಿಧ್ವನಿಸುತ್ತದೆ.
ಶ್ರೀಲಂಕಾ ವಿರುದ್ಧ ನಡೆದಿದ್ದ ಫೈನಲ್ ಪಂದ್ಯದಲ್ಲಿ 275ರನ್ಗಳ ಗುರಿ ಬೆನ್ನತ್ತಿದ್ದ ಟೀಂ ಇಂಡಿಯಾ ಆರಂಭದಲ್ಲೇ ಸೆಹ್ವಾಗ್ ವಿಕೆಟ್ ಬೇಗ ಕಳೆದುಕೊಂಡಿದ್ದರೂ ಗೌತಮ್ ಗಂಭೀರ್ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಜೊತೆಯಾಟ ಭಾರತಕ್ಕೆ ಮತ್ತೊಂದು ವಿಶ್ವಕಪ್ ತಂದಿಟ್ಟಿತ್ತು. 99ರನ್ಗಳಿಸಿದ್ದ ಗಂಭೀರ್ ಹಾಗೂ ಧೋನಿ ಅಜೇಯ 91ರನ್ ಬಾರಿಸಿ, ಕೊನೆಯದಾಗಿ ಸಿಕ್ಸರ್ ಸಿಡಿಸಿ ಎಲ್ಲರ ಮನದಲ್ಲಿ ಹಸಿರಾಗಿ ಉಳಿಯುವಂತೆ ಮಾಡಿದ್ದರು. 6 ವಿಕೆಟ್ಗಳೊಂದಿಗೆ ಭರ್ಜರಿ ಜಯ ಸಾಧಿಸಿದ್ದ ಟೀಂ ಇಂಡಿಯಾ ಎರಡನೇ ಬಾರಿ ವಿಶ್ವಕಪ್ ಎತ್ತಿ ಹಿಡಿದಿತ್ತು.
ಫೈನಲ್ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ತೋರಿದ ಧೋನಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಹಾಗೂ ಟೂರ್ನಿಯುದ್ದಕ್ಕೂ ಅದ್ಭುತ ಆಲ್ರೌಂಡ್ ಪ್ರದರ್ಶನ ನೀಡಿದ್ದ ಯುವರಾಜ್ ಸಿಂಗ್ ಸರಣಿ ಶ್ರೇಷ್ಠ ಪ್ರಶಸ್ತಿ ಬಾಚಿಕೊಂಡರು. ಇನ್ನು ಲಿಟಲ್ ಮಾಸ್ಟರ್ ಸಚಿನ್ ತೆಂಡೂಲ್ಕರ್ ಈ ವಿಶ್ವಕಪ್ ಟ್ರೋಫಿ ಎತ್ತಿ ಹಿಡಿಯಲು ಬರೋಬ್ಬರಿ 22 ವರ್ಷಗಳ ಕಾಲ ಕಾಯಬೇಕಾಗಿತ್ತು. ಈ ದಿನವನ್ನ ಇದೀಗ ಮತ್ತೊಮ್ಮೆ ಎಲ್ಲರೂ ಮೆಲಕು ಹಾಕಿಕೊಂಡಿದ್ದಾರೆ.