ಮುಂಬೈ: ಭಾರತ ತಂಡದ ಆರಂಭಿಕ ಬ್ಯಾಟ್ಸ್ಮನ್ ಶಿಖರ್ ಧವನ್ ಭುಜದ ನೋವಿನಿಂದ ಬಳಲುತ್ತಿರುವುದರಿಂದ ಕಿವೀಸ್ ಪ್ರವಾಸದಿಂದ ಹೊರಬಿದ್ದಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಫೀಲ್ಡಿಂಗ್ ವೇಳೆ ಧವನ್ ಭುಜದ ಗಾಯಕ್ಕೆ ತುತ್ತಾಗಿ ಫೀಲ್ಡಿಂಗ್ ಹಾಗೂ ಬ್ಯಾಟಿಂಗ್ನಿಂದ ಹೊರಗುಳಿದಿದ್ದರು. ಇದೀಗ ನ್ಯೂಜಿಲ್ಯಾಂಡ್ ವಿರುದ್ಧದ ಏಕದಿನ ಹಾಗೂ ಟಿ20 ತಂಡದಿಂದ ಹೊರಬಿದ್ದಿದ್ದಾರೆ ಎನ್ನಲಾಗಿದೆ.
ಈಗಾಗಲೇ ಭಾರತ ತಂಡದ ಆಟಗಾರರೆಲ್ಲರೂ ನ್ಯೂಜಿಲ್ಯಾಂಡ್ಗೆ ತೆರಳಿದ್ದಾರೆ. ಆದರೆ ಧವನ್ ಮಾತ್ರ ಭಾರತದ ಆಟಗಾರರ ಜೊತೆಗೆ ಫ್ಲೈಟ್ ಹತ್ತಿಲ್ಲ ಎಂದು ತಿಳಿದುಬಂದಿದೆ. ಇದರಿಂದ ಅವರು ಕಿವೀಸ್ ಪ್ರವಾಸದಿಂದ ಹೊರಗುಳಿಯಲಿದ್ದಾರೆ ಎಂಬುದು ಖಚಿತವಾಗಿದೆ.
ಈಗಾಗಲೇ ಕೋಚ್ ರವಿಶಾಸ್ತ್ರಿ ಹಾಗೂ ಬಿಸಿಸಿಐ ಆಯ್ಕೆ ಸಮಿತಿ ಈ ಕುರಿತು ಚರ್ಚೆ ನಡೆಸಿದ್ದಾರೆ ಎಂಬ ಮಾಹಿತಿಯಿದ್ದು, ಬದಲಿ ಆಟಗಾರರನನ್ನು ಆದಷ್ಟು ಬೇಗ ಘೋಷಿಸಲಿದ್ದಾರೆ ಎಂದು ತಿಳಿದುಬಂದಿದೆ.
ಶಿಖರ್ ಸ್ಥಾನಕ್ಕೆ ಪೃಥ್ವಿ ಶಾ ಅಥವಾ ಶುಬ್ಮನ್ ಗಿಲ್ ಅವರು ಆಯ್ಕೆಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಇವರಿಬ್ಬರಿಗೆ ಕನ್ನಡಿಗ ಮಯಾಂಕ್ ಕೂಡ ಪ್ರಬಲ ಸ್ಪರ್ಧೆಯೊಡ್ಡಲಿದ್ದಾರೆ. ಮಯಾಂಕ್ ಈಗಾಗಲೇ ವಿಂಡೀಸ್ ವಿರುದ್ಧ ಹಾಗೂ ವಿಶ್ವಕಪ್ ತಂಡದಲ್ಲಿ ಹೆಚ್ಚುವರಿ ಆರಂಭಿಕನಾಗಿ ಅವಕಾಶ ಪಡೆದಿದ್ದರು. ಆದರೆ ಆಡುವ 11ರ ಬಳಗದಲ್ಲಿ ಕಾಣಿಸಿಕೊಂಡಿರಲಿಲ್ಲ.
ಇಂಡಿಯಾ ಎ ತಂಡ ಕಿವೀಸ್ ಪ್ರವಾಸ ಕೈಗೊಂಡಿರುವುದರಿಂದ ಅಲ್ಲಿರುವ ಆಟಗಾರರಲ್ಲೇ ಯಾರನ್ನಾದರೂ ಕೊಹ್ಲಿ ಪಡೆಗೆ ಆಯ್ಕೆ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ.