ಕ್ರೈಸ್ಟ್ಚರ್ಚ್(ನ್ಯೂಜಿಲ್ಯಾಂಡ್): ಭಾರತ ತಂಡದ ಬ್ಯಾಟ್ಸ್‌ಮನ್‌ಗಳು ನ್ಯೂಜಿಲ್ಯಾಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ತಮ್ಮ ಕಳಪೆ ಪ್ರದರ್ಶನ ಮುಂದುವರಿಸುತ್ತಿದ್ದರೂ ಯಾರ್ಕರ್ ಸ್ಪೆಷಲಿಸ್ಟ್ ಬುಮ್ರಾ ಮಾತ್ರ ತಮ್ಮ ತಂಡದ ಬ್ಯಾಟ್ಸ್ಮನ್ಗಳನ್ನು ದೂರಲು ನಿರಾಕರಿಸಿದ್ದಾರೆ.
ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಅತ್ಯುತ್ತಮ ಬೌಲಿಂಗ್ ದಾಳಿ ನಡೆಸಿ ನ್ಯೂಜಿಲ್ಯಾಂಡ್ ತಂಡವನ್ನು 235 ರನ್‌ಗಳಿಗೆ ಕಟ್ಟಿ ಹಾಕುವಲ್ಲಿ ಯಶಸ್ವಿಯಾದರು. ಆದರೆ ಎರಡನೇ ಇನ್ನಿಂಗ್ಸ್ನಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದರಿಂದ ಭಾರತ ತಂಡ ಕೇವಲ 96 ರನ್‌ಗಳಿಗೆ 6 ವಿಕೆಟ್ ಕಳೆದುಕೊಂಡು ಸೋಲಿನ ಸುಳಿಗೆ ಸಿಲುಕಿದೆ.
"ನಾವು ಒಂದು ಬೌಲಿಂಗ್ ಘಟಕವಾಗಿ ಎದುರಾಳಿ ಮೇಲೆ ದಾಳಿ ನಡೆಸಿ ಅನೇಕ ಅವಕಾಶಗಳನ್ನು ಸೃಷ್ಟಿಸಿದೆವು. ಎದುರಾಳಿ ಬ್ಯಾಟ್ಸ್ಮನ್ಗಳಲ್ಲಿ ಒತ್ತಡ ಉಂಟುಮಾಡಿ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದೆವು. ತಂಡದಲ್ಲಿ ಸೀನಿಯರ್ ಬೌಲರ್ಗಳಾಗಿ ನಮ್ಮ ಪ್ರದರ್ಶನ ಸಂತೋಷ ತಂದಿದೆ" ಎಂದು ಬುಮ್ರಾ ತಿಳಿಸಿದ್ದಾರೆ.
ಬ್ಯಾಟ್ಸ್ಮನ್ಗಳ ವೈಫಲ್ಯ ಕುರಿತು ಮಾತನಾಡಿದ ಅವರು "ನಾವು ಆರೋಪ ಮಾಡುವ ಆಟವನ್ನು ಆಡುವುದಿಲ್ಲ. ಅದು ನಮ್ಮ ಸಂಸ್ಕೃತಿಯೂ ಅಲ್ಲ. ಆದ್ದರಿಂದ ನಾನು ಇಲ್ಲಿ ಯಾರೊಬ್ಬರ ವೈಫಲ್ಯದ ಬಗ್ಗೆಯೂ ಮಾತನಾಡುವುದಿಲ್ಲ. ಕೆಲವೊಂದು ಬಾರಿ ಬ್ಯಾಟ್ಸ್‌ಮನ್‌ಗಳು ಉತ್ತಮ ಪ್ರದರ್ಶನ ನೀಡಿ ಬೌಲರ್‌ಗಳು ವಿಕೆಟ್ ಪಡೆಯುವಲ್ಲಿ ವಿಫಲವಾದರೆ ನಮ್ಮನ್ನು ದೂರುವ ಸ್ವಾತಂತ್ರ್ಯ ಯಾರಿಗೂ ಇರುವುದಿಲ್ಲ. ಹಾಗೆಯೇ ಬ್ಯಾಟ್ಸ್ಮನ್ಗಳಿಗೂ ನಮ್ಮಂತೆಯೇ ಸ್ವಾತಂತ್ರ್ಯ ನೀಡಬೇಕಲ್ಲವೇ" ಎಂದು ಬುಮ್ರಾ ಪ್ರಶ್ನಿಸಿದ್ದಾರೆ.
ನಾವು ಒಂದು ತಂಡವಾಗಿ ಕಠಿಣ ಸಂದರ್ಭದಲ್ಲಿ ಸಿಲುಕಿದ್ದೇವೆ. ಇಂತಹ ಸನ್ನಿವೇಶದಲ್ಲಿ ತಂಡವನ್ನು ಮುಂದಕ್ಕೆ ತಳ್ಳುವ ಜವಾಬ್ದಾರಿಯನ್ನು ಮಾಡಬೇಕಾಗಿದೆ. ನಮ್ಮ ಬಳಿ ಈಗ ಇಬ್ಬರು ಬ್ಯಾಟ್ಸ್ಮನ್ಗಳಿದ್ದಾರೆ. ನಾಳೆ ಆದಷ್ಟು ರನ್ ಗಳಿಸಲು ಪ್ರಯತ್ನಿಸಿಬೇಕಾಗಿದೆ" ಎಂದು ಬುಮ್ರಾ ತಿಳಿಸಿದ್ದಾರೆ.
"ನಾನು ನನ್ನ ವೈಯಕ್ತಿಕ ಪ್ರದರ್ಶನದ ಬಗ್ಗೆ ಗಮನ ಹರಿಸುವುದಿಲ್ಲ. ಕೇವಲ ಉತ್ತಮವಾಗಿ ಬೌಲಿಂಗ್ ಮಾಡುವುದಕ್ಕೆ ಯೋಜನೆ ರೂಪಿಸಿಕೊಳ್ಳುವುದರ ಕಡೆಗೆ ಹಾಗೂ ಅದನ್ನು ಕಾರ್ಯರೂಪಕ್ಕೆ ತರುವುದಕ್ಕೆ ಪ್ರಯತ್ನಿಸುತ್ತೇನೆ. ಇದರಿಂದ ನನಗೆ ಕೆಲವೊಮ್ಮೆ ವಿಕೆಟ್ ಸಿಗಬಹುದು, ಕೆಲವು ಬಾರಿ ಇತರೆ ಬೌಲರ್‌ಗಳಿಗೆ ವಿಕೆಟ್‌ಗಳು ಸಿಗಬಹುದು. ನನ್ನಿಂದ ಏನನ್ನು ನಿಯಂತ್ರಿಸಲು ಸಾಧ್ಯವೋ ಅದರ ಬಗ್ಗೆ ಮಾತ್ರ ನನ್ನ ಗಮನ ಇರುತ್ತದೆ" ಎಂದು 26 ವರ್ಷದ ಆಟಗಾರ ಹೇಳಿದ್ದಾರೆ.