ಆಕ್ಲೆಂಡ್:ಕನ್ನಡಿಗ ಕೆ.ಎಲ್.ರಾಹುಲ್ ಅಜೇಯ ಅರ್ಧಶತಕ ಹಾಗೂ ಬೌಲರ್ಗಳ ಕರಾರುವಾಕ್ ದಾಳಿಯಿಂದ ನ್ಯೂಜಿಲ್ಯಾಂಡ್ ವಿರುದ್ಧದ ಎರಡನೇ ಟಿ-20 ಪಂದ್ಯದಲ್ಲೂ ಭಾರತ ಗೆಲುವು ದಾಖಲಿಸಿ ಸರಣಿಯಲ್ಲಿ 2-0 ಅಂತರಗಳ ಮುನ್ನಡೆ ಸಾಧಿಸಿದೆ.
ಕಿವೀಸ್ ತಂಡ ನೀಡಿದ 133 ರನ್ಗಳ ಗುರಿ ಬೆನ್ನತ್ತಿದ ಟೀಂ ಇಂಡಿಯಾಗೆ ಆರಂಭಿಕ ಆಘಾತ ಎದುರಾಯ್ತು. ಮೊದಲ ಓವರ್ನಲ್ಲೇ ಎರಡು ಬೌಂಡರಿ ಬಾರಿಸಿ ಸ್ಫೋಟಕ ಆರಂಭ ನೀಡಿದ ರೋಹಿತ್ (8ರನ್) ಅದೇ ಓವರ್ನಲ್ಲೇ ರಾಸ್ ಟೇಲರ್ಗೆ ಕ್ಯಾಚ್ ನೀಡಿ ನಿರ್ಗಮಿಸಿದರು.
ನಂತರ ಜೊತೆಯಾದ ಕೆ.ಎಲ್.ರಾಹುಲ್ ಮತ್ತು ವಿರಾಟ್ ನಿಧಾನಗತಿಯಲ್ಲಿ ಜವಾಬ್ದಾರಿ ಅರಿತು ಬ್ಯಾಟ್ ಬೀಸಿದ್ರು. ಕಳೆದ ಪಂದ್ಯದಲ್ಲಿ ಮಿಂಚಿದ್ದ ನಾಯಕ ವಿರಾಟ್ ಇಂದಿನ ಪಂದ್ಯದಲ್ಲಿ ಕೇವಲ 11 ರನ್ಗಳಿಸಿ ವಿಕೆಟ್ ಒಪ್ಪಿಸಿದ್ರು. ಈ ವೇಳೆ ಜೊತೆಯಾದ ರಾಹುಲ್ (ಅಜೇಯ 57 ರನ್ ಮತ್ತು ಯುವ ಆಟಗಾರ ಶ್ರೇಯಸ್ ಅಯ್ಯರ್ 44 ರನ್ ಗಳಿಸೋ ಮೂಲಕ ಕಿವೀಸ್ ಬೌಲಿಂಗ್ ದಾಳಿಯನ್ನ ಮನಬಂದಂತೆ ದಂಡಿಸಿದರು. ಗೆಲುವಿಗೆ 8 ರನ್ ಅಗತ್ಯವಿದ್ದಾಗ ಅಯ್ಯರ್ ಔಟ್ ಆದರು. ಬಳಿಕ ಶಿವಂ ದುಬೆ 4 ಎಸೆತಗಳಲ್ಲಿ 8 ರನ್ ಬಾರಿಸುವ ಮೂಲಕ ಟೀಂ ಇಂಡಿಯಾ 17.3ನೇ ಎಸೆತದಲ್ಲಿ 135 ರನ್ ಬಾರಿಸಿ ಗೆಲುವಿನ ದಡ ಸೇರಿತು.
ಇದಕ್ಕೂ ಮುನ್ನ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ನ್ಯೂಜಿಲೆಂಡ್ ತಂಡ ಉತ್ತಮ ಆರಂಭವನ್ನೇನೂ ಪಡೆಯಿತು. ಆರಂಭಿಕ ಆಟಗಾರರಾದ ಮಾರ್ಟಿನ್ ಗಪ್ಟಿಲ್ ಮತ್ತು ಕಾಲಿನ್ ಮನ್ರೋ ಮೊದಲ ವಿಕೆಟ್ 48 ರನ್ಗಳ ಜೊತೆಯಾಟವಾಡಿದ್ರು. ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಗಪ್ಟಿಲ್ 20 ಎಸೆತಗಳಲ್ಲಿ 2 ಸಿಕ್ಸರ್ ಮತ್ತು 4 ಬೌಂಡರಿಗಳಿಂದ 33 ರನ್ ಗಳಿಸಿ ಶಾರ್ದುಲ್ ಠಾಕೂರ್ಗೆ ವಿಕೆಟ್ ಒಪ್ಪಿಸಿದ್ರು.
ನಂತರ ಜೊತೆಯಾದ ಕಾಲಿನ್ ಮನ್ರೋ ಮತ್ತು ಕೇನ್ ವಿಲಿಯಮ್ಸನ್ ಜೋಡಿಯನ್ನು ಶಿವಂ ದುಬೆ ಬೇರ್ಪಡಿಸಿದ್ರು. 25 ಎಸೆತದಲ್ಲಿ 26 ರನ್ ಗಳಿಸಿದ್ದ ಮನ್ರೋ, ದುಬೆ ಎಸೆತದಲ್ಲಿ ಕೊಹ್ಲಿಗೆ ಕ್ಯಾಚ್ ನೀಡಿ ಪೆವಿಲಿಯನ್ ಸೇರಿಕೊಂಡರು. ನಂತರ ಬಂದ ಗ್ರಾಂಡ್ಹೋಮ್ ಕಳೆದ ಬಾರಿಯಂತೆ ಈ ಪಂದ್ಯದಲ್ಲೂ ನಿರಾಸೆ ಅನುಭವಿಸಿದ್ರು. ಮೊದಲ ಟಿ-20 ಪಂದ್ಯದಲ್ಲಿ ಅಬ್ಬರಿಸಿದ್ದ ಕಿವೀಸ್ ನಾಯಕ ಕೇನ್ ವಿಲಿಯಮ್ಸನ್ 20 ಎಸೆತಗಳಲ್ಲಿ ಕೇವಲ 14 ರನ್ ಗಳಿಸಿ ಜಡೇಜಾಗೆ ವಿಕೆಟ್ ಒಪ್ಪಿಸಿದ್ರು. 12 ಓವರ್ಗಲ್ಲಿ ಪ್ರಮುಖ 4 ವಿಕೆಟ್ ಕಳೆದುಕೊಂಡ ಆತಿಥೇಯ ತಂಡ ಸಂಕಷ್ಟಕ್ಕೆ ಸಿಲುಕಿತು.
ಈ ವೇಳೆ ಜೊತೆಯಾದ ಅನುಭವಿ ರಾಸ್ ಟೇಲರ್ ಮತ್ತು ಟಿಮ್ ಸೈಫರ್ಟ್ ತಂಡಕ್ಕೆ ಆಸರೆಯಾದ್ರು. ತಾಳ್ಮೆಯ ಆಟವಾಡಿದ ಈ ಜೋಡಿ ಸಂಕಷ್ಟಕ್ಕೆ ಸಿಲುಕಿದ್ದ ತಂಡವನ್ನು ಸಾಧಾರಣ ಮೊತ್ತದತ್ತ ಕೊಂಡೊಯ್ದರು. ಅಂತಿಮವಾಗಿ ವಿಲಿಯಮ್ಸನ್ ಪಡೆ ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 132 ರನ್ ಗಳಿಸಿತು. ಭಾರತದ ಪರ ರವೀಂದ್ರ ಜಡೇಜಾ 2, ಶಿವಂ ದುಬೆ, ಶಾರ್ದೂಲ್ ಠಾಕೂರ್ ಹಾಗು ಬುಮ್ರಾ ತಲಾ ಒಂದು ವಿಕೆಟ್ ಪಡೆದುಕೊಂಡರು.
ಈ ಗೆಲುವಿನ ಮೂಲಕ ಭಾರತ 5 ಟಿ-20 ಪಂದ್ಯಗಳ ಸರಣಿಯಲ್ಲಿ 2-0 ಅಂತರದ ಮುನ್ನಡೆ ಸಾಧಿಸಿದೆ. ಮೂರನೇ ಪಂದ್ಯ ಜ.29ರಂದು ಹ್ಯಾಮಿಲ್ಟನ್ನಲ್ಲಿ ನಡೆಯಲಿದೆ.