ಸಿಡ್ನಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೂರನೇ ಟೆಸ್ಟ್ ಸರಣಿಯ ನಾಲ್ಕನೇ ದಿನದಾಟ ಕುತೂಹಲ ಮೂಡಿಸಿದ್ದು, ಸ್ಟೀವ್ ಸ್ಮಿತ್ ತಂಡಕ್ಕೆ ಆಸರೆಯಾಗಿದ್ದಾರೆ. ಭೋಜನ ವಿರಾಮದ ವೇಳೆಗೆ ಟೀಂ ಇಂಡಿಯಾ 2 ವಿಕೆಟ್ ಪಡೆದಿದ್ದು, ಆಸೀಸ್ 276 ರನ್ಗಳ ಮುನ್ನಡೆ ಹೊಂದಿದೆ.
ಮೂರನೇ ದಿನದಾಟದ ಅಂತ್ಯಕ್ಕೆ 2 ವಿಕೆಟ್ ಕಳೆದುಕೊಂಡು 103 ರನ್ಗಳಿಸಿದ್ದ ಆಸೀಸ್ ಪರ ಬ್ಯಾಟಿಂಗ್ ಆರಂಭಿಸಿದ ಸ್ಟೀವ್ ಸ್ಮಿತ್ ಮತ್ತು ಮಾರ್ನಸ್ ಲಾಬುಶೇನ್ ಉತ್ತಮವಾಗಿ ಇನ್ನಿಂಗ್ಸ್ ಕಟ್ಟಿದ್ರು. 3ನೇ ವಿಕೆಟ್ಗೆ ಈ ಜೋಡಿ ಶತಕದ ಜೊತೆಯಾಟವಾಡಿತು.
ಮೊದಲ ಇನ್ನಿಂಗ್ಸ್ನಂತೆ ದ್ವಿತೀಯ ಇನ್ನಿಂಗ್ಸ್ನಲ್ಲೂ ಟೀಂ ಇಂಡಿಯಾ ಆಟಗಾರರನ್ನು ಕಾಡಿದ ಲಾಬುಶೇನ್ ಅರ್ಧಶತಕ ಸಿಡಿಸಿದ್ರು. ಆದರೆ 73 ರನ್ ಗಳಿಸಿರುವಾಗ ಸೈನಿ ಎಸೆತದಲ್ಲಿ ಸಹಾಗೆ ಕ್ಯಾಚ್ ನೀಡಿ ನಿರ್ಗಮಿಸಿದ್ರು. ನಂತರ ಬಂದ ಮ್ಯಾಥ್ಯೂ ವೇಡ್ (4) ತಮ್ಮ ಕಳಪೆ ಆಟವನ್ನು ಮುಂದುವರೆಸಿದ್ದು, ನವದೀಪ್ ಸೈನಿಗೆ ವಿಕೆಟ್ ಒಪ್ಪಿಸಿದ್ರು.
ಟೀಂ ಇಂಡಿಯಾ ಆಟಗಾರರನ್ನು ಕಾಡುತ್ತಿರುವ ಸ್ಟೀವ್ ಸ್ಮಿತ್ ಅರ್ಧಶತಕ ಸಿಡಿಸಿ ಬ್ಯಾಟಿಂಗ್ ಮುಂದುವರೆಸಿದ್ದಾರೆ. ಭೋಜನ ವಿರಾಮದ ವೇಳೆಗೆ ಆಸ್ಟ್ರೇಲಿಯಾ ತಂಡ 4 ವಿಕೆಟ್ ಕಳೆದುಕೊಂಡು 182 ರನ್ ಗಳಿಸಿದ್ದು, 276 ರನ್ಗಳ ಮುನ್ನಡೆ ಸಾಧಿಸಿದೆ.