ಮುಂಬೈ: ಎನ್ಸಿಎ ಅಧ್ಯಕ್ಷ ರಾಹುಲ್ ದ್ರಾವಿಡ್ ಬಿಸಿಸಿಐ ಕೋವಿಡ್-19 ನಿಯಂತ್ರಿಸಲು ರಚನೆಯಾಗಿರುವ ಕಾರ್ಯಪಡೆ ಸೇರಿಕೊಂಡಿದ್ದಾರೆ.
ಭಾರತ ತಂಡದ ಮಾಜಿ ನಾಯಕ ರಾಹುಲ್ ದ್ರಾವಿಡ್ ಬೆಂಗಳೂರಿನಲ್ಲಿರುವ ನ್ಯಾಷನಲ್ ಕ್ರಿಕೆಟ್ ಅಕಾಡೆಯ ಮುಖ್ಯಸ್ಥರಾಗಿ ಈಗಾಗಲೇ ಉತ್ತಮ ಸೇವೆ ಸಲ್ಲಿಸುತ್ತಿದ್ದಾರೆ. ಇದೀಗ ಬಿಸಿಸಿಐ ಅವರನ್ನು ಕೋವಿಡ್-19 ಟಾಸ್ಕ್ ಫೋರ್ಸ್ ತಂಡಕ್ಕೂ ಸೇರ್ಪಡೆಗೊಳಿಸಿದೆ. ಈ ವಿಚಾರವನ್ನು ಬಿಸಿಸಿಐ ರಾಜ್ಯಗಳಿಗೆ ಕಳುಹಿಸಿರುವ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ (ಎಸ್‌ಒಪಿ)ನಲ್ಲಿ ಬಿಸಿಸಿಐ ತಿಳಿಸಿದೆ.
ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ನಲ್ಲಿ ಎಲ್ಲಾ ರಾಜ್ಯಗಳ ಕ್ರಿಕೆಟಿಗರು ತಮ್ಮ ಅಭ್ಯಾಸ ಪುನರಾರಂಭಿಸುವ ಮೊದಲು ಒಪ್ಪಿಗೆ ಪತ್ರಕ್ಕೆ ಸಹಿ ಹಾಕಬೇಕಿದೆ. ಎಸ್‌ಒಪಿ ಪ್ರಕಾರ 60 ವರ್ಷ ಮೇಲ್ಪಟ್ಟ ಸಹಾಯಕ ಸಿಬ್ಬಂದಿ ಅಥವಾ ಮೈದಾನದ ಯಾವುದೇ ಸಿಬ್ಬಂದಿ ಹಾಗೂ ಸಕ್ಕರೆ ಕಾಯಿಲೆ, ಶ್ವಾಸಕೋಶ ಸಂಬಂಧಿ ಕಾಯಿಲೆ ಇರುವವರು ಕೂಡ ತರಬೇತಿಗೆ ಭಾಗವಹಿಸದಂತೆ ನಿರ್ಬಂಧ ವಿಧಿಸಲಾಗಿದೆ.
ತರಬೇತಿ ಪುನರಾರಂಭಗೊಂಡಾಗ ಕೋವಿಡ್-19 ಟಾಸ್ಕ್ ಫೋರ್ಸ್‌ನಲ್ಲಿ ರಾಹುಲ್ ದ್ರಾವಿಡ್ ಜೊತೆ ವೈದ್ಯಕೀಯ ಅಧಿಕಾರಿಗಳು, ನೈರ್ಮಲ್ಯ ಅಧಿಕಾರಿ, ಬಿಸಿಸಿಐ ಅಧಿಕಾರಿಗಳು ಇರಲಿದ್ದಾರೆ ಎಂದು ತಿಳಿದು ಬಂದಿದೆ.