ಸಿಡ್ನಿ: ಭಾರತದ ಬುಮ್ರಾ, ಮೊಹಮ್ಮದ್ ಶಮಿ ಹಾಗೂ ಆಸ್ಟ್ರೇಲಿಯಾದ ಮಿಚೆಲ್ ಸ್ಟಾರ್ಕ್ ಅವರಂಥ ಅನುಭವಿ ಬೌಲರ್ಗಳೇ ಬ್ಯಾಟ್ಸ್ಮನ್ಗಳೆದುರು ಸಾಕಷ್ಟು ರನ್ ಬಿಟ್ಟುಕೊಟ್ಟು ಸಿಡ್ನಿ ಮೈದಾನದಲ್ಲಿ ವೈಫಲ್ಯ ಅನುಭವಿಸಿದ್ದಾರೆ. ಆದರೆ ಇದೇ ಕ್ರೀಡಾಂಗಣದಲ್ಲಿ ಕೇವಲ ಎರಡೇ ಎರಡು ಅಂತಾರಾಷ್ಟ್ರೀಯ ಪಂದ್ಯವನ್ನಾಡಿರುವ ನಟರಾಜನ್ ಬ್ಯಾಟ್ಸ್ಮನ್ಸ್ನೇಹಿ ಪಿಚ್ನಲ್ಲಿ ಮಿಂಚು ಹರಿಸಿದ್ದಾರೆ. ಈ ಮೂಲಕ ವಿಶ್ವಕ್ರಿಕೆಟ್ನಲ್ಲಿ ಕ್ರಿಕೆಟ್ ಪಂಡಿತರಿಂದ ಮೆಚ್ಚುಗೆ ಗಳಿಸಿದ್ದಾರೆ.
ಭಾರತ ತಂಡದ ಯಾರ್ಕರ್ ಕಿಂಗ್ ಎಂದೇ ಖ್ಯಾತರಾಗಿರುವ ಜಸ್ಪ್ರೀತ್ ಬುಮ್ರಾ ಸಿಡ್ನಿಯಲ್ಲಿ ನಡೆದಿದ್ದ ಏಕದಿನ ಪಂದ್ಯದಲ್ಲಿ 73 ಮತ್ತು 79, ಅನುಭವಿ ಮೊಹಮ್ಮದ್ ಶಮಿ 59 ಮತ್ತು 73 ಹಾಗೂ ಆಸ್ಟ್ರೆಲಿಯಾದ ಸ್ಟಾರ್ ಬೌಲರ್ ಮಿಚೆಲ್ ಸ್ಟಾರ್ಕ್ 65 ಮತ್ತು 82 ರನ್ ಬಿಟ್ಟುಕೊಟ್ಟು ದುಬಾರಿಯಾಗಿದ್ದರು.
ಅಷ್ಟೇ ಏಕೆ?, ಇಂದು ನಡೆಯುತ್ತಿರುವ 2ನೇ ಟಿ20 ಪಂದ್ಯದಲ್ಲಿ ಭಾರತದ ಎಲ್ಲಾ ಬೌಲರ್ಗಳು 9ಕ್ಕಿಂತ ಹೆಚ್ಚಿನ ಎಕಾನಮಿಯಲ್ಲಿ ರನ್ ಬಿಟ್ಟುಕೊಟ್ಟರೆ, ನಟರಾಜನ್ ಮಾತ್ರ ಕೇವಲ 5ರ ಏಕಾನಮಿಯಲ್ಲಿ 20 ರನ್ ಬಿಟ್ಟುಕೊಟ್ಟಿದ್ದಲ್ಲದೆ 2 ವಿಕೆಟ್ ಕೂಡ ಪಡೆದರು.
ಓದಿ: ಅಭ್ಯಾಸ ಪಂದ್ಯದಲ್ಲಿ ಸೊನ್ನೆ ಸುತ್ತಿದ ಪೃಥ್ವಿ ಶಾ- ಗಿಲ್: ನಾಯಕ ರಹಾನೆ ಶತಕದಾಟ
ಮೂರು ತಿಂಗಳ ಹಿಂದೆ ನಟರಾಜನ್ ಯಾರೆಂದು ತಮಿಳುನಾಡಿನ ಕೆಲವರಿಗೆ ಬಿಟ್ಟರೆ ಬೇರೆ ಯಾರಿಗೂ ತಿಳಿದಿರಲಿಲ್ಲ. ಆದರೆ ಐಪಿಎಲ್ ಪಂದ್ಯಾವಳಿಗಳಲ್ಲಿ ಅವರು ನೀಡಿದ ಪ್ರದರ್ಶನ ಇಂದು ವಿಶ್ವಮಟ್ಟದಲ್ಲಿ ಯಾರ್ಕರ್ ಕಿಂಗ್ ಎಂಬ ಬಿರುದನ್ನು ಅವರಿಗೆ ತಂದು ಕೊಟ್ಟಿದೆ. ಸ್ವತಃ ಆಸ್ಟ್ರೇಲಿಯಾ ಮಾಧ್ಯಮಗಳೇ ನಟರಾಜನ್ ಅವರನ್ನು ಯಾರ್ಕರ್ ಸ್ಪೆಷಲಿಸ್ಟ್ ಎಂದು ಕರೆದಿವೆ.