ನವದೆಹಲಿ:ತಾವು ಎಲ್ಲಿದ್ದೇವೆ ಎಂದು ಸಮರ್ಪಕ ಮಾಹಿತಿ ನೀಡದ ಭಾರತ ಕ್ರಿಕೆಟ್ ತಂಡದ ಆಟಗಾರರಾದ ಚೇತೇಶ್ವರ ಪೂಜಾರ, ಕೆ.ಎಲ್.ರಾಹುಲ್, ಮತ್ತು ರವೀಂದ್ರ ಜಡೇಜ ಸೇರಿದಂತೆ ಕೇಂದ್ರೀಯ ಗುತ್ತಿಗೆ ಪಟ್ಟಿಯಲ್ಲಿರುವ ಐವರು ಕ್ರಿಕೆಟಿಗರಿಗೆ ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಘಟಕ (ನಾಡಾ)ದಿಂದ ಶನಿವಾರ ನೋಟಿಸ್ ಜಾರಿಯಾಗಿದೆ.
ಮಹಿಳಾ ತಂಡದ ಆಟಗಾರ್ತಿಯರಾದ ಸ್ಮೃತಿ ಮಂದಾನ ಮತ್ತು ದೀಪ್ತಿ ಶರ್ಮಾ ಅವರಿಗೂ ನೋಟಿಸ್ ನೀಡಲಾಗಿದೆ. ಆದರೆ ಈ ಬಗ್ಗೆ ಸ್ಪಂದಿಸಿರುವ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಪಾಸ್‌ವರ್ಡ್ ಸಮಸ್ಯೆಯಿಂದಾಗಿ ವಿವರ ಸಲ್ಲಿಸಲು ಆಗಿಲ್ಲ ಎಂದು ಆಟಗಾರರನ್ನು ಸಮರ್ಥಿಸಿಕೊಂಡಿದೆ.
ನೋಟಿಸ್ ಜಾರಿ ಬಗ್ಗೆ ಮಾತನಾಡಿರುವ ನಾಡಾ ಮಹಾನಿರ್ದೇಶಕ ನವೀನ್ ಅಗರವಾಲ್, ಉದ್ದೀಪನ ಮದ್ದು ತಡೆಗೆ ಸಂಬಂಧಿಸಿದ ಆಡಳಿತ ಮತ್ತು ವ್ಯವಸ್ಥಾಪನಾ ಸೌಲಭ್ಯ ಸಾಫ್ಟ್‌ವೇರ್‌ನಲ್ಲಿ (ಆ್ಯಡಮ್ಸ್) ಕ್ರೀಡಾಪಟುಗಳು ಎರಡು ಬಗೆಯಲ್ಲಿ ಮಾಹಿತಿ ನೀಡಬಹುದಾಗಿದೆ. ಇದನ್ನು ಸ್ವತಃ ಆಟಗಾರರು ಅಥವಾ ಅವರು ಪ್ರತಿನಿಧಿಸುವ ಸಂಸ್ಥೆಯೂ ಕೂಡ ಮಾಹಿತಿ ಅಪ್‌ಲೋಡ್ ಮಾಡಬಹುದಾಗಿದೆ. ಕೆಲವು ಕ್ರೀಡಾಪಟುಗಳಿಗೆ ಈ ಕುರಿತು ಸಮರ್ಪಕ ಮಾಹಿತಿ ಇಲ್ಲ. ಅಲ್ಲದೆ ಇಂಟರ್‌ನೆಟ್ ಸಮಸ್ಯೆ ಇರುವುದರಿಂದಲೂ ಕೆಲವರಿಗೆ ಮಾಹಿತಿ ತುಂಬಲು ಆಗುತ್ತಿಲ್ಲ. ಇಂತಹ ಸಂದರ್ಭಗಳಿದ್ದರೆ ಸಂಬಂಧಪಟ್ಟ ಸಂಸ್ಥೆಯಿಂದ ನೆರವು ಪಡೆಯಬೇಕು ಎಂದು ತಿಳಿಸಿದ್ದಾರೆ.