ಮೈಸೂರು:ಪ್ರಸಕ್ತ ಸಾಲಿನ ಕರ್ನಾಟಕ ಪ್ರೀಮಿಯರ್ ಲೀಗ್ನಲ್ಲಿ ದಾಖಲೆ ಮೇಲೆ ದಾಖಲೆ ನಿರ್ಮಾಣವಾಗುತ್ತಿದ್ದು, ಇದೀಗ ಮತ್ತೊಂದು ರೆಕಾರ್ಡ್ ನಿರ್ಮಾಣವಾಗಿದೆ.
ಮೈಸೂರಿನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಮೈದಾನದಲ್ಲಿ ಬಳ್ಳಾರಿ ಟಸ್ಕರ್ಸ್ ಹಾಗೂ ಮೈಸೂರು ವಾರಿಯರ್ಸ್ ನಡುವೆ ನಡೆದ ಪಂದ್ಯದಲ್ಲಿ ಈ ದಾಖಲೆ ನಿರ್ಮಾಣವಾಗಿದೆ. ಟಾಸ್ ಗೆದ್ದು ಮೊದಲು ಬ್ಯಾಟ್ ನಡೆಸಿದ ಬಳ್ಳಾರಿ ತಂಡ ನಾಯಕ ಸಿಎಂ ಗೌತಮ್(92), ಕೃಷ್ಣಪ್ಪ ಗೌತಮ್(48) ಹಾಗೂ ಪಡಿಕ್ಕಲ್(57)ರನ್ಗಳ ನೆರವಿನಿಂದ ನಿಗದಿತ 20 ಓವರ್ಗಳಲ್ಲಿ 2ವಿಕೆಟ್ ಕಳೆದುಕೊಂಡು 240ರನ್ಗಳಿಕೆ ಮಾಡಿತು.
ಇದರ ಬೆನ್ನತ್ತಿದ್ದ ಮೈಸೂರು ವಾರಿಯರ್ಸ್ ತಂಡ ಆರಂಭದಲ್ಲೇ ಮೂರು ವಿಕೆಟ್ ಕಳೆದುಕೊಂಡು ಸೋಲುವ ಭೀತಿಗೊಳಗಾಯಿತು. ಆದರೆ ಈ ವೇಳೆ ಬ್ಯಾಟ್ ಬೀಸಿದ ಅನಿರುದ್ಧ ಜೋಶಿ ಕೇವಲ 58 ಎಸೆತಗಳಲ್ಲಿ 9ಸಿಕ್ಸರ್ ಹಾಗೂ 7 ಬೌಂಡರಿಗಳ ನೆರವಿನಿಂದ 125ರನ್ಗಳಿಕೆ ಮಾಡಿ ತಂಡಕ್ಕೆ ಆಸರೆಯಾದರು.
ಇನ್ನು ತಂಡಕ್ಕೆ ಕೊನೆ ಆರು ಎಸೆತಗಳಲ್ಲಿ 20ರನ್ಗಳ ಅವಶ್ಯಕತೆ ಇದ್ದಾಗ ಬ್ಯಾಟ್ ಬೀಸಿದ ಮಂಜೀಶ್ ರೆಡ್ಡಿ ಸಿಕ್ಸರ್ ಮೇಲೆ ಸಿಕ್ಸರ್ ಸಿಡಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು. ಜತೆಗೆ ತಾವು ಎದುರಿಸಿದ 9 ಎಸೆತಗಳಲ್ಲಿ ಬರೋಬ್ಬರಿ 30ರನ್ಗಳಿಕೆ ಮಾಡಿದರು. ಕೊನೆಯದಾಗಿ ತಂಡ 20 ಓವರ್ಗಳಲ್ಲಿ 7ವಿಕೆಟ್ ಕಳೆದುಕೊಂಡು 241ರನ್ಗಳಿಕೆ ಮಾಡಿ 3ವಿಕೆಟ್ಗಳ ಗೆಲುವು ದಾಖಲು ಮಾಡುವ ಮೂಲಕ ಪ್ಲೇ-ಆಫ್ ಕನಸು ಜೀವಂತವಾಗಿಟ್ಟುಕೊಂಡಿದೆ.